ಸಮಸ್ಯೆ ಪರಿಹಾರಕ್ಕೆ ಗ್ರಾಮ ಗ್ರಾಮದಲ್ಲಿ ವಿಲೇವಾರಿ ಕ್ಯಾಂಪ್ ಆಯೋಜನೆ
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮಾಹಿತಿ
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಲ್ಲಿ ಸುಳ್ಯ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆಯಾಗಿದೆ. ಅರ್ಜಿ ಹಾಕಿರುವ ಎಲ್ಲ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿದೆ. ಅಲ್ಲಲ್ಲಿ ಕೆಲವೊಂದು ಪ್ರಕರಣದಲ್ಲಿ ಸಮಸ್ಯೆ ಕಂಡುಬಂದಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಗ್ರಾಮದಲ್ಲಿ ವಿಲೇವಾರಿ ಕ್ಯಾಂಪ್ ಆಯೋಜಿಸಲಾಗಿದೆ ಎಂದು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮಾಹಿತಿ ನೀಡಿದ್ದಾರೆ.
ಡಿ.7ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿ 27739 ಮಂದಿ ಅರ್ಜಿ ಹಾಕಿದ್ದು, 25 933 ಮಂದಿಗೆ ಹಣ ಸಂದಾಯವಾಗುತ್ತಿದ್ದು ಶೇ.93.49 ಸಾಧನೆಯಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ 27283 ಮಂದಿಯಲ್ಲಿ 26901 ಮಂದಿ ಯೋಜನೆ ಪಡೆಯುತಿದ್ದು ಇಲ್ಲಿ ಶೇ.99.97 ಸಾಧನೆಯಾಗಿದೆ. ಯುವ ನಿಧಿಯಲ್ಲಿ ಒಟ್ಟು 286 ಮಂದಿ ಅರ್ಜಿ ಸಲ್ಲಿಸಿದ್ದು 255 ಮಂದಿ ಅರ್ಹತೆ ಪಡೆದಿದ್ದಾರೆ. ಒಂದು ವರ್ಷದಲ್ಲಿ ತಾಲೂಕಿಗೆ 29, 02, 500 ಸಂದಾಯವಾಗಿದೆ. ಶಕ್ತಿ ಯೋಜನೆಯಲ್ಲಿ ನವೆಂಬರ್ ತಿಂಗಳಲ್ಲಿ 3, 76, 965 ಮಂದಿ ಪ್ರಯಾಣ ಮಾಡಿದ್ದಾರೆ. ವರ್ಷದಲ್ಲಿ 22 ಕೋಟಿ 06 ಲಕ್ಷದ 35 ಸಾವಿರ ಸುಳ್ಯ ಘಟಕದ ಮೂಲಕ ಸರಕಾರದಿಂದ ಕೆ.ಎಸ್.ಆರ್.ಟಿ.ಸಿ.ಗೆ ಹಣ ಪಾವತಿಯಾಗಿದೆ. ಅನ್ನ ಭಾಗ್ಯದಲ್ಲಿ 17417 ಮಂದಿಯ ಖಾತೆಗೆ ಹಣ ಸಂದಾಯವಾಗುತ್ತಿದೆ ಎಂದವರು ಮಾಹಿತಿ ನೀಡಿದರು.
ಅರ್ಜಿ ಸಲ್ಲಿಸಿದವರಲ್ಲಿ ಐಟಿ ಪಾವತಿ, ಆದಾಯ ಹೆಚ್ಚಳ ಇತ್ಯಾದಿ ತಾಂತ್ರಿಕ ಕಾರಣದಿಂದ ಹಣ ಬಾರದೇ ಬಾಕಿಯಾಗಿದ್ದು ಹಾಗೂ ಇನ್ನೂ ಕೆಲವರು ಅರ್ಜಿ ಸಲ್ಲಿಸಲು ಬಾಕಿಯಾಗಿದೆ ಎಂಬ ಕಾರಣಕ್ಕೆ ಸರಕಾರದ ಯೋಜನೆಗಳು ಎಲ್ಲರಿಗೂ ಸಿಗಬೇಕೆಂದು ನಾವು ಗ್ರಾಮ ಗ್ರಾಮದಲ್ಲಿ ವಿಲೇವಾರಿ ಕ್ಯಾಂಪ್ ಮಾಡುತ್ತೇವೆ. ಈಗಾಗಲೇ ದಿನನಿಗದಿಯಾಗಿದ್ದು ಡಿ.9ರಂದು ಸಂಪಾಜೆಯಲ್ಲಿ ಕ್ಯಾಂಪ್ ಪ್ರಥಮವಾಗಿ ಆಯೋಜಿಸಿದ್ದೇವೆ. ಅದೇ ದಿನ ಮಧ್ಯಾಹ್ನ ಅರಂತೋಡು ಗ್ರಾ.ಪಂ. ನಲ್ಲಿ, ಉಳಿದಂತೆ ಡಿ.17ರಂದು ಪಂಜ ಗ್ರಾ.ಪಂ. ನಲ್ಲಿಬೆಳಗ್ಗೆ, ಮಧ್ಯಾಹ್ನ ಕಲ್ಮಡ್ಕದಲ್ಲಿ, ಡಿ.26ರಂದು ಬೆಳಗ್ಗೆ ಮಂಡೆಕೋಲು, ಮಧ್ಯಾಹ್ನ ಅಜ್ಜಾವರ ದಲ್ಲಿ, ಜ.2 ರಂದು ಬೆಳಗ್ಗೆ ಕೊಲ್ಲಮೊಗ್ರ, ಮಧ್ಯಾಹ್ನ ಹರಿಹರದಲ್ಲಿ, ಜ.8 ರಂದು ಪೆರುವಾಜೆ, ಮಧ್ಯಾಹ್ನ ಬೆಳ್ಳಾರೆ, ಜ.13ರಂದು ಗುತ್ತಿಗಾರು, ಮಧ್ಯಾಹ್ನ ದೇವಚಳ್ಳ, ಜ.22ರಂದು ಕೊಡಿಯಾಲ, ಮಧ್ಯಾಹ್ನ ಮುರುಳ್ಯ, ಜ.30 ಅಮರಮುಡ್ನೂರು, ಮಧ್ಯಾಹ್ನ ನೆಲ್ಲೂರು ಕೆಮ್ರಾಜೆ, ಫೆ.4 ಕನಕಮಜಲು, ಮಧ್ಯಾಹ್ನ ಜಾಲ್ಸೂರು, ಫೆ.12 ರಂದು ಕಳಂಜ, ಮಧ್ಯಾಹ್ನ ಬಾಳಿಲ, ಫೆ.19ರಂದು ಮಡಪ್ಪಾಡಿ, ಮಧ್ಯಾಹ್ನ ಮರ್ಕಂಜ, ಫೆ.24ರಂದು ಸುಳ್ಯನಗರ ಪಂಚಾಯತ್, ಮಧ್ಯಾಹ್ನ ಉಬರಡ್ಕಮಿತ್ತೂರು, ಮಾ.6ರಂದು ಐವರ್ನಾಡು, ಮಧ್ಯಾಹ್ನ ಸುಳ್ಯನ.ಪಂ., ಮಾ.10ರಂದು ಆಲೆಟ್ಟಿಯಲ್ಲಿ ವಿಲೇವಾರಿ ಕ್ಯಾಂಪ್ ಆಯೋಜಿಸಿದೆ. ಗ್ರಾಮ ಪಂಚಾಯತ್ ಸಹಯೋಗದಲ್ಲಿ ಪಂಚಾಯತ್ ವಠಾರದಲ್ಲಿ ಕ್ಯಾಂಪ್ ನಡೆಯಲಿದ್ದು, ಅರ್ಜಿ ಸಲ್ಲಿಸಿ ಹಣ ಬಾರದವರು ಕ್ಯಾಂಪ್ ನಲ್ಲಿ ಭಾಗವಹಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ವಿವರ ನೀಡಿದರು.
ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಮಾತನಾಡಿ, ಗ್ಯಾರಂಟಿ ಯೋಜನೆಯಲ್ಲಿ ಉತ್ತಮ ಸಾಧನೆಯಾಗಿದೆ. ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿರುವವರು ಕ್ಯಾಂಪ್ ಗೆ ಬಂದು ಮಾಹಿತಿ ಪಡೆಯಲು ಕ್ಯಾಂಪ್ ಆಯೋಜಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಲತೀಫ್ ಅಡ್ಕಾರು, ವಿಜೇಶ್ ಹಿರಿಯಡ್ಕ, ಅಬ್ಬಾಸ್ ಅಡ್ಕ ಇದ್ದರು.