ಜಾಲ್ಸೂರು ಅರಣ್ಯ ತಪಾಸಣಾ ಚೆಕ್ ಪೋಸ್ಟ್ ನಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯದಲ್ಲಿದ್ದ ದೇಲಂಪಾಡಿ ಗ್ರಾಮದ ಕೂಡುಮಜಲು ಮುದಿಯಾರು ಸದಾಶಿವ ಗೌಡರು ಕರ್ತವ್ಯದಲ್ಲಿರುವಾಗಲೇ ಕುಸಿದು ಬಿದ್ದು, ಆಸ್ಪತ್ರೆಯಲ್ಲಿ ನಿಧನರಾದ ಘಟನೆ ಡಿ.8ರಂದು ಬೆಳಿಗ್ಗೆ ಸಂಭವಿಸಿದೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಡಿ.7ರಂದು ರಾತ್ರಿ ಜಾಲ್ಸೂರಿನ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ನಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸದಾಶಿವ ಗೌಡರು ಬೆಳಿಗ್ಗೆ 5.30ರ ವೇಳೆಗೆ ಚಯರಲ್ಲಿ ಕುಳಿತಿರುವಲ್ಲಿ ಕುಸಿದು ಬಿದ್ದಿದ್ದರು.
ತಕ್ಷಣ ಅವರನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಇಂಜೆಕ್ಷನ್ ಕೊಟ್ಟು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆ ಅವರು ಮೃತಪಟ್ಟಿದ್ದರೆನ್ನಲಾಗಿದೆ.
ಸದಾಶಿವ ಗೌಡರು ಜಾಲ್ಸೂರಿನಲ್ಲಿ ಕಳೆದ ಏಳು ವರ್ಷಗಳಿಂದ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುಂದಿನ ವರ್ಷ ಮೇ ತಿಂಗಳಲ್ಲಿ ನಿವೃತ್ತಿಗೊಳ್ಳಲಿದ್ದರು.
ಮೃತರು ಪತ್ನಿ ಯಶೋದ, ಪುತ್ರ ಹಿತೇಶ್ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.