ಬೆಳ್ಳಾರೆ: ಸ್ನೇಹಶ್ರೀ ಮಹಿಳಾ ಮಂಡಲದ ದಶ ಸಂಭ್ರಮ

0

ಒಳ್ಳೆಯ ಕೆಲಸ ಮಾಡಿದಾಗ ಹೆಸರು ಶಾಶ್ವತವಾಗಿ ಉಳಿಯುತ್ತದೆ : ಮಮತಾ ಗಟ್ಟಿ

ಬೇರೆ ಬೇರೆ ತಾಯಂದಿರ ಮಕ್ಕಳು ಇಂದು ಒಂದೇ ತಾಯಿಯ ಮಕ್ಕಳಾಗಿ ಸಮಾಜ ಗುರುತಿಸುವಂತ ಕಾರ್ಯ ಮಾಡಿದ್ದಾರೆ. ಹತ್ತು ವರ್ಷಗಳನ್ನು ಪೂರೈಸಿದ ಸಂಸ್ಥೆ 10 ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದು, ಬಡವರಿಗೆ ನೆರವಾಗಿರುವುದು ನಿಜವಾದ ದೇವರ ಪೂಜೆ ಮಾಡಿದಂತೆ. ನಿಮ್ಮ ಸಂಸ್ಥೆಗೆ ಸರಕಾರದ ಮಟ್ಟದಿಂದ ಸಿಗಬಹುದಾದ ಅನುದಾನಕ್ಕೆ ಪ್ರಯತ್ನ ಪಡುತ್ತೇನೆ. ಒಳ್ಳೆಯ ಕೆಲಸ ಮಾಡಿದಾಗ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ರಾಜ್ಯ ಗೇರು ನಿಗಮದ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ ಹೇಳಿದರು.

ಅವರು
ಡಿ. 10ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನ ಬೆಳ್ಳಾರೆಯಲ್ಲಿ ಸಂಜೆ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯ ಬಳಿಕ ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪಡ್ಪುರವರ ಅಧ್ಯಕ್ಷತೆಯಲ್ಲಿ ನಡೆದ ಸ್ನೇಹಶ್ರೀ ಮಹಿಳಾ ಮಂಡಲದ ದಶ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ರಾಜ್ಯ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ನಮ್ಮ ಮಕ್ಕಳನ್ನು 10ನೇ ತರಗತಿಯವರೆಗೆ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಓದಿಸಿ.ಕನ್ನಡದ ಜೊತೆ ಜೊತೆಗೆ ಪ್ರಾದೇಶಿಕ ಭಾಷೆಗಳನ್ನು ಕಲಿಸುವಾಗ ಅರೆಭಾಷೆಯನ್ನು ಮತ್ತು ಅರೆಭಾಷಾ ಸಂಸ್ಕ್ರತಿಯನ್ನು ಕಲಿಸಿ ಎಂದರು. ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಎಸ್.ಎನ್. ಮನ್ಮಥ ದಶ ಕಾರ್ಯಕ್ರಮಗಳ‌ ಅನಾವರಣಗೊಳಿಸಿದರು. ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್. ರೈ ವಿದ್ಯಾನಿಧಿ ಹಸ್ತಾಂತರಿಸಿದರು. ಸಮಾಜ ಸೇವೆ ಮತ್ತು ಸಹಕಾರ ಸೇವೆಗಾಗಿ ಶ್ರೀಮತಿ ರಾಜೀವಿ ಆರ್. ರೈಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬೆಳ್ಳಾರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ. ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮರ್ಪಣಾ ಮನೋಭಾವದಿಂದ ದುಡಿದ ಸಂಸ್ಥೆ ಸ್ನೇಹಶ್ರೀ ಮಹಿಳಾ ಮಂಡಲ

ಸ್ನೇಹಶ್ರೀ ಮಹಿಳಾ ಮಂಡಲ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿರುವುದರಿಂದ ಇವತ್ತು ಸಮಾಜದಲ್ಲಿ ಗುರುತಿಸಿಕೊಂಡಿದೆ. ಸಮಾಜದಲ್ಲಿ ಟೀಕಿಸುವವರನ್ನು, ನಿಂದಿಸುವವರನ್ನು ಲೆಕ್ಕಿಸದೆ ಇಂದು ಪುರುಷರಿಗೆ ಸಮಾನವಾಗಿ ಸ್ನೇಹಶ್ರೀ ಮಹಿಳಾ ಮಂಡಲದ ಬೆಳೆದು ನಿಂತಿದೆ ಎಂದು ದಿಕ್ಸೂಚಿ ಭಾಷಣ ಮಾಡಿದ
ಬೆಳ್ಳಾರೆ ಜೇಸಿಯ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಹೇಳಿದರು. ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡು, ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ರೈ ಬಜನಿ, ಬೆಳ್ಳಾರೆ ವಿರಾಟ್ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಬೀಡು, ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಭಾರತಿ ಕೊಲಂಬಳ ಶ್ರೀಮತಿ ರಾಜೀವಿ ರೈಯವರ ಸನ್ಮಾನಪತ್ರವನ್ನು ವಾಚಿಸಿದರು. ಮಹಿಳಾ ಮಂಡಲದ ಕೋಶಾಧಿಕಾರಿ ಕುಸುಮ ಕುರುಂಬುಡೇಲು ಸ್ವಾಗತಿಸಿ, ಮಹಿಳಾ ಮಂಡಲದ ಕಾರ್ಯದರ್ಶಿ ಶೋಭಾ ಕುರುಂಬುಡೇಲು ವಂದಿಸಿದರು. ಎಣ್ಮೂರು ಪ್ರೌಢಶಾಲಾ ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪೂರ್ಣಿಮಾ ಮತ್ತು ಇಂದಿರಾ ಅಜಪಿಲ ಪ್ರಾರ್ಥಿಸಿದರು. ಸ್ಮರಣ ಸಂಚಿಕೆಯ ಸಂಪಾದಕರಾದ ಕೊರಗಪ್ಪ ಕುರುಂಬುಡೇಲು ಸಂಚಿಕೆಯ ಬಗ್ಗೆ ವಿವರಣೆ ನೀಡಿದರು. ಜ್ಞಾನದೀಪ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಉಮೇಶ್ ಮಣಿಕ್ಕಾರ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮದ ಬಳಿಕ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ನಾಗ ಮಾಣಿಕ್ಯ ಎಂಬ ನಾಟಕ ನಡೆಯಿತು.