ಅಮೆಚೂರಿನಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ
ಪೆರಾಜೆ ಗ್ರಾಮದ ಅಮೆಚೂರು ನಿವಾಸಿ, ಬಿಜೆಪಿ ಮುಖಂಡ ಪೆರಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎ.ಸಿ. ಹೊನ್ಬಪ್ಪ ಅವರು ಡಿ.11ರಂದು ಬೆಳಿಗ್ಗೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಸಾರ್ವಜನಿಕರಿಂದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಕಾರ್ಯ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದ ಹೊರಗೆ ನಡೆಯುತ್ತಿದೆ.
ಬಳಿಕ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಅಮೆಚೂರು ಶಾಲೆಗೆ ಕೊಂಡೊಯ್ದು, ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಲ್ಲಿಂದ ಮೃತರ ಅಮೆಚೂರಿನ ಸ್ವಗೃಹದಲ್ಲಿ ಅಂತಿಮ ವಿಧಿ ವಿಧಾನ ಪೂರೈಸಿ, ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪೆರಾಜೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ, ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಎ.ಸಿ. ಹೊನ್ನಪ್ಪ ಅವರು ಬಿಜೆಪಿ ಮುಖಂಡರಾಗಿ, ಕೊಡಗು ಜಿಲ್ಲಾ ಭಾಜಪಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪೆರಾಜೆ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾಗಿ, ಗ್ರಾ.ಪಂ. ಉಪಾಧ್ಯಕ್ಷರಾಗಿ, 2003ರಿಂದ 2005ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ, ಕೊಡಗು ಜಿಲ್ಲಾ ಜೇನು ಸೊಸೈಟಿ ನಿರ್ದೇಶಕರಾಗಿ , ಶ್ರೀ ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದರು.