ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿರುವ ದೊಡ್ಡ ದೊಡ್ಡ ಜಲ್ಲಿಕಲ್ಲಿನದ್ದೆ ದರ್ಬಾರ್
ಇದು ಅರಂತೋಡು, ಬಾಜಿನಡ್ಕ, ರೆಂಜಾಳ ರಸ್ತೆಯ ದುರವಸ್ಥೆ
ರೆಂಜಾಳದಿಂದ ಅರಂತೋಡು ರಸ್ತೆಯಲ್ಲಿ ಸಂಚರಿಸುತ್ತೀರೆಂದರೆ ನಿಮ್ಮ ದೇಹದ ಪಾಟ್ಸ್೯ ಮತ್ತು ವಾಹನಗಳ ಪಾಟ್ಸ್೯ ಲಗಾಡಿ ಹೋಗುವುದಂತು ಖಂಡಿತ! ಯಾಕೆಂದರೆ ರಸ್ತೆಯುದ್ದಕ್ಕೂ ಹೊಂಡಗಳು. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೊಡ್ಡ ದೊಡ್ಡ ಜಲ್ಲಿಕಲ್ಲುಗಳು. ಈ ರಸ್ತೆಯಲ್ಲಿ ಸಂಚರಿಸಿದ ಬಹುತೇಕ ಎಲ್ಲರೂ ಸೊಂಟ ಪೋಂಡು… ಎನ್ನ ಗಾಡಿ(ವಾಹನ) ಲಗಾಡಿ ಪೋಂಡು… ಎನ್ನುತ್ತಿದ್ದಾರೆ.
ಸೋಣಂಗೇರಿ ಸುಬ್ರಹ್ಮಣ್ಯ ರಸ್ತೆಯ ದೊಡ್ಡತೋಟದಿಂದ ಮರ್ಕಂಜ ರಸ್ತೆಯಲ್ಲಿ ಬರುವಾಗ ರೆಂಜಾಳದಿಂದ ಕವಲೊಡೆದು ಬಾಜಿನಡ್ಕವಾಗಿ ಅರಂತೋಡು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಇದೀಗ ಶೋಚನೀಯ ಸ್ಥಿತಿಗೆ ತಲುಪಿದೆ.
ದಿನನಿತ್ಯ ಈ ರಸ್ತೆಯಲ್ಲಿ ಹತ್ತಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆ ಮಾತ್ರ ತೀರ ಹದಗೆಟ್ಟಿದೆ. ದೊಡ್ಡ ದೊಡ್ಡ ಜಲ್ಲಿಕಲ್ಲುಗಳು ಎದ್ದು ಹೋಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದರಿಂದ ಅದೆಷ್ಟೋ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಇದೇ ರಸ್ತೆಯ ಒಂದು ಕಡೆ ರಸ್ತೆಯ ಮಧ್ಯೆ ಅಪಾಯಕಾರಿಯಾಗಿದ್ದ ಹೊಂಡಕ್ಕೆ ಗಿಡನೆಟ್ಟು ಪ್ರತಿಭಟಿಸಿದ್ದಾರೆ. ಒಟ್ಟಾಗಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಈ ರಸ್ತೆಯನ್ನು ಸುಸಜ್ಜಿತಗೊಳಿಸಬೇಕಾಗಿದೆ.