ಬಂಟರ ಸಂಘದಿಂದ ಸುಳ್ಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

0

ಮಕ್ಕಳು ಆಸಕ್ತಿಯ ಕ್ಷೇತ್ರದಲ್ಲಿ ಮುಂದೆ ಸಾಗಲು ಪೋಷಕರ ಪ್ರೋತ್ಸಾಹ ಸಿಗಲಿ

ಸಮಾಜದಲ್ಲಿ ತಮ್ಮ ಐಡೆಂಟಿಟಿಗಾಗಿ ಮಕ್ಕಳು ಹೀಗೆ ಇರಬೇಕೆಂದು ಯಾವ ಪೋಷಕರೂ ಕೂಡಾ ಮಕ್ಕಳಿಗೆ ಒತ್ತಡ ಹೇರಬೇಡಿ. ಅವರ ಆಸಕ್ತಿಯ ಕ್ಷೇತ್ರವನ್ನು ತಿಳಿದು ಅದಕ್ಕೆ ತಕ್ಕುದಾದ ಪ್ರೋತ್ಸಾಹ ನೀಡಿದಾಗ ಅವರು ಬೆಳೆಯುತ್ತಾರೆ, ನಮಗೂ ಗೌರವ ಸಿಗುತ್ತದೆ. ಆ ನಿಟ್ಟಿನಲ್ಲಿ ಪೋಷಕರು ತೊಡಗಿಸಿಕೊಳ್ಳಬೇಕು'' ಎಂದು ಮಂಗಳೂರು ಅಭಿಮತ ಟಿ.ವಿ. ಆಡಳಿತ ಪಾಲುದಾರರಾದ ಡಾ| ಮಮತಾ ಪಿ. ಶೆಟ್ಟಿ ಹೇಳಿದರು.

ಡಿ.೨೯ರಂದು ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘ ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದೊಂದಿಗೆ ಸುಳ್ಯ ಕೇರ್ಪಳದ ಬಂಟರ ಸಂಘದ ಸಭಾಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಂಟ ಸಮುದಾಯ ಸಮಾಜಕ್ಕೆ ನಾಯಕತ್ವ ನೀಡಿದೆ. ಬಂಟರು ಸ್ವಾರ್ಥಿಗಳಲ್ಲ. ಸಮಾಜಕ್ಕಾಗಿ ದುಡಿಯುವವರು. ಸುಳ್ಯದ ಬಂಟ ಸಮುದಾಯವೂ ಸಮಾಜಕ್ಕಾಗಿ ದುಡಿಯುತ್ತಿದೆ ಎಂದ ಅವರು, ಸಮಾಜದ ವತಿಯಿಂದ ನಡೆಯುವ ಕಾರ್ಯಕ್ರಮಕ್ಕೆ ನಾವು ಹಿರಿಯರು ಮಾತ್ರ ಭಾಗವಹಿಸುವುದಲ್ಲ. ನಮ್ಮ ಮಕ್ಕಳನ್ನು ಕೂಡಾ ಕರೆದುಕೊಂಡು ಬಂದು ನಮ್ಮ ಸಮಾಜದ ಆಚಾರ ವಿಚಾರಗಳನ್ನು ಅವರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.

ನಮ್ಮ ಕೆಲಸದ ಬಗ್ಗೆ ತೃಪ್ತಿ ಇದೆ : ಜೆ.ಪಿ.ರೈ
ಅಧ್ಯಕ್ಷತೆ ವಹಿಸಿದ ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು, “ನಮ್ಮ ಹಿರಿಯರ ಆಶಯದಂತೆ ನಮ್ಮ ಈಗಿನ ಆಡಳಿತ ಮಂಡಳಿ ಇಲ್ಲಿ ಹಾಸ್ಟೆಲ್ ಹಾಗೂ ಸಮುದಾಯ ಭವನವನ್ನು ಸುಂದರವಾಗಿ ನಿರ್ಮಿಸಲಾಗಿದೆ. ನಮ್ಮ ಕೆಲಸ ಕಾರ್ಯದಲ್ಲಿ ನಮಗೆ ತೃಪ್ತಿ ಇದೆ. ನಮ್ಮ ಕಾರ್ಯ ಸಾಧನೆಗೆ ಹೊರಗಿನವರು ಪ್ರಶಂಸಿಸುತ್ತಾರೆ. ಜಿಲ್ಲೆಯಲ್ಲಿಯೂ ಹೆಸರಿದೆ. ಆದರೆ ಇಲ್ಲಿ ನಮ್ಮವರೇ ಕೆಲವರು ಒಪ್ಪುತ್ತಿಲ್ಲ ಎಂದ ಅವರು ಬಂಟ ಸಮುದಾಯ ಭವನದ ಬೆಳವಣಿಗೆ, ಹೊರ ಬಾಕಿಯ ಕುರಿತು ವಿವರವನ್ನು ಸಭೆಯಲ್ಲಿ ಮುಂದಿಟ್ಟರು.


ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪರಸ್ಕೃತ, ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ ಶೆಟ್ಟಿಯವರು ಸಮಾರಂಭವನ್ನು ಉದ್ಘಾಟಿಸಿದರು.
ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ಮತ್ತು ಪ್ರಶಸ್ತಿ ಸಮಿತಿ ಚೇರ್ ಮ್ಯಾನ್ ಉಮೇಶ್ ಶೆಟ್ಟಿಯವರು ಬೆಂಗಳೂರು ಸಂಘದಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಬೆಂಗಳೂರು ಬಂಟರ ಸಂಘದ ನಿರ್ದೇಶಕಿ ಶ್ರೀಮತಿ ಶೋಭಾ ಶೇಖ ಮುಖ್ಯ ಅತಿಥಿಗಳಾಗಿದ್ದರು.


ಪ್ರತಿಭಾ ಪುರಸ್ಕಾರ : ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿಸಾಧನೆ ಗೈದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಂಟ ಸಮಾಜದ ಗಂಗಾಧರ ರೈ ಸೋಣಂಗೇರಿ, ಐತ್ತಪ್ಪ ರೈ ಅಜ್ರಂಗಳ, ಕರುಣಾಕರ ಆಳ್ವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಬಂಟ ಸಮುದಾಯ ಭವನಕ್ಕೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು.


ನನ್ನ ಮನಸ್ಸು – ನನ್ನ ಕನಸ್ಸು ಕೃತಿ ಬಿಡುಗಡೆ
ಕು.ನಿರೀಕ್ಷಾ ಸುಲಾಯರ ಕವನ ಸಂಕಲನ ನನ್ನ ಮನಸ್ಸು – ನನ್ನ ಕನಸ್ಸು ಕೃತಿ ೨೭ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿದ್ದು, ಪ್ರತಿಭಾ ಪುರಸ್ಕಾರದಲ್ಲಿ ಮರು ಬಿಡುಗಡೆಗೊಳಿಸಲಾಯಿತು. ಬಳಿಕ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.


ಬಂಟರ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀಮತಿ ಸನ್ನುತ ರೈ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾ ಬಿ ರೈ, ಜಾಲ್ಸೂರು ವಲಯ ಬಂಟರ ಸಂಘದ ಅಧ್ಯಕ್ಷ ಶಿವರಾಮ ರೈ, ಸುಳ್ಯ ವಲಯ ಬಂಟರ ಸಂಘದ ಅಧ್ಯಕ್ಷ ದಯಾಕರ ರೈ, ಅರಂತೋಡು ವಲಯ ಬಂಟರ ಸಂಘದ ಅಧ್ಯಕ್ಷ ಜೆ.ಕೆ.ರೈ, ಬೆಳ್ಳಾರೆ ವಲಯ ಬಂಟರ ಸಂಘದ ಅಧ್ಯಕ್ಷ ಕರುಣಾಕರ ಆಳ್ವ ವೇದಿಕೆಯಲ್ಲಿದ್ದರು.


ಸುಳ್ಯ ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ಸ್ವಾಗತಿಸಿ, ಕೋಶಾಧಿಕಾರಿ ಗಂಗಾಧರ ರೈ ಸೋಣಂಗೇರಿ ವಂದಿಸಿದರು. ಶ್ರೀಮತಿ ಗೀತಾ ಶೆಟ್ಟಿ ಹಾಗೂ ಶ್ರೀಮತಿ ವಸಂತಿ ರೈ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುನಂದ ಶೆಟ್ಟಿ, ಉಷಾ ಶೆಟ್ಟಿ, ಅಕ್ಷತಾ ಶೆಟ್ಟ್ಟಿ ಮೊದಲಾದವರು ಸಹಕರಿಸಿದರು.