ಗ್ಯಾರಂಟಿ ವಿಲೇವಾರಿ ಶಿಬಿರದಿಂದ ಪ್ರಗತಿ : ಸುಳ್ಯದಲ್ಲಿ ಮಾಸಿಕ ಸಭೆ

0

ಶಕ್ತಿ ಯೋಜನೆ ಪ್ರಗತಿಗೆ ಅಧಿಕಾರಿಗಳ ಸ್ಪಂದನೆಯಿಲ್ಲ – ಆರೋಪ : ಸಭೆಗೆ ಬಾರದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗೆ ನೋಟೀಸು

ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮಿತಿ ಸದಸ್ಯರುಗಳಾದ ಈಶ್ವರ ಆಳ್ವ, ಭವಾನಿಶಂಕರ್ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಶಿಲ್ಪಾ ಇಬ್ರಾಹಿಂ, ಶೇಖರ ಕಣೆಮರಡ್ಕ, ರವಿ ಗುಂಡ್ಯಡ್ಕ, ಭವಾನಿ, ಕಾಂತಿ ಬಿ.ಎಸ್., ಮಣಿಕಂಠ ಕೊಳಗೆ, ಅತೀಫ್ ಅಡ್ಕಾರು, ಅಬ್ಬಾಸ್ ಅಡ್ಕ, ವಿಜೇಶ್ ಹಿರಿಯಡ್ಕ ಹಾಗೂ ಅಧಿಕಾರಿಗಳು ಇದ್ದರು.

ಅಜ್ಜಾವರ ಹಾಗೂ ಕಾಂತಮಂಗಲ ನ್ಯಾಯಬೆಲೆ ಅಂಗಡಿ ಪ್ರತೀ ಸೋಮವಾರ ಪೂರ್ತಿಯಾಗಿ ಕಾರ್ಯನಿರ್ವಹಿಸಿ ಸೇವೆ ನೀಡಲು ಸೂಚಿಸಲಾಗಿದೆ ಎಂದು ಆಹಾರ ನಿರೀಕ್ಷಕರು‌ ಮಾಹಿತಿ ನೀಡಿದರು.

ನ್ಯಾಯಬೆಲೆ ಅಂಗಡಿಯಲ್ಲಿ ರಾಜ್ಯ ಸರಕಾರದ ನಾಮಫಲಕ ಅಳವಡಿಸುವಂತೆ ಹೇಳಿದ್ದರೂ ಅರಾಮತೋಡು, ಬಡ್ಡಡ್ಕ ಇನ್ನೂ ಕೆಲವು ಕಡೆ ಕೇಂದ್ರ ಸರಕಾರದ ಹಳೆ ಬ್ಯಾನರೇ ಇದೆ. ಅದನ್ನು ಬಲದಾಯಿಸಿಲ್ಲ ಎಂದು ಸದಸ್ಯ ಭವಾನಿಶಂಕರ್ ಕಲ್ಮಡ್ಕ ಹೇಳಿದರು. ಅಧ್ಯಕ್ಷ ಶಾಹುಲ್ ಹಮೀದ್ ಧ್ವನಿಗೂಡಿಸಿದರು.
ಗ್ಯಾರಂಟಿ ಯೋಜನಾ ಸಭೆಯಲ್ಲಿ
ವಿಚಾರ ಮೇಲಧಿಕಾರಿಗಳಿಗೆ ತಿಳಿಸಿ, ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವಂತೆ ಇ.ಒ. ರಾಜಣ್ಣ ಸೂಚನೆ ನೀಡಿದರು.

ಮಂಡೆಕೋಲಿನ ಚೇರದಮೂಲೆ ಎಂಬಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ. ಅವರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ಸದಸ್ಯ ಶೇಖರ ಕಣೆಮರಡ್ಕ ಒತ್ತಾಯಿಸಿದರು.

ಹೊಸ ರೇಷನ್ ಕಾರ್ಡ್ ಕೊಡಲು ಸಾಧ್ಯವಾಗದೇ ಹಲವು ಯೋಜನೆಯಿಂದ‌ ವಂಚಿತರಾಗಿದ್ದಾರೆ. ರೇಷನ್ ಕಾರ್ಡ್ ಕೊಡುವ ಬಗ್ಗೆ ಸರಕಾರಕ್ಕೆ ಬರೆಯಬೇಕೆಂದು ಶೇಖರ್ ಕಣೆಮರಡ್ಕ ಹೇಳಿದಾಗ, ಈ‌ಕುರಿತು‌ ಜಿಲ್ಲಾ ಮಟ್ಟದ ಸಭೆಯಲ್ಲಿ ಪ್ರಸ್ತಾಪ ವಾಗಿದ್ದು ಮುಂದಿನ ವರ್ಷ ರೇಷನ್ ಕಾರ್ಡ್ ಗೆ ಅವಕಾಶ ನೀಡುವ ಕುರಿತು‌ಮಾಹಿತಿ ಇದೆ ಎಂದು ಅಧ್ಯಕ್ಷ ಶಾಹುಲ್ ಹಮೀದ್ ಉತ್ತರಿಸಿದರು.

ಗ್ರಾಮ ಮಟ್ಟದಲ್ಲಿ ವಿಲೇವಾರಿ ಶಿಬಿರ ಹಮ್ಮಿಕೊಂಡಿದ್ದರಿಂದ 6 ಗ್ರಾಮದಿಂದ 12 ಹೊಸ ಅರ್ಜಿಗಳು ಬಂದಿರುವ ಬಗ್ಗೆ ಸಿಡಿಪಿಒ ಶೈಲಜಾ ಮಾಹಿತಿ ನೀಡಿದರು.

ಶಕ್ತಿ ಯೋಜನೆಯ ಕುರಿತು‌ಮಾಹಿತಿ‌ ನೀಡಬೇಕಾಗಿದ್ದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಸಭೆಗೆ ಬಾರದಿರುವುದಕ್ಕೆ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು. ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಭವಾನಿ ಮೊದಲಾದವರು ಮಾತನಾಡಿ ಸರಕಾರ ಯೋಜನೆ ತರುತ್ತದೆಯಾದರೂ ಅಧಿಕಾರಿಗಳು ಪ್ರಗತಿಗೆ ಸಹಕಾರ ನೀಡಬೇಕು. ಹೀಗೆ ಮಾಡಿದರೆ ಹೇಗೆ ಎಂದು ಹೇಳಿದರು. ಸಭೆಗೆ ಬಾರದ ಅಧಿಕಾರಿಗೆ ನೋಟೀಸು ನೀಡಿ, ಕಾರಣ ಕೇಳಿ. ಸಮರ್ಪಕ ಉತ್ತರ ಸಿಗದಿದ್ದರೆ ಜಿಲ್ಲಾ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದರು. ಅತೀ ಹೆಚ್ಚು ಸಮಸ್ಯೆ ಇರುವುದೇ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಅವರು ಸಭೆಗೆ ಬಾರದಿರುವುದು ಸರಿಯಲ್ಲ ಎಂದು ಸದಸ್ಯರು ಹೇಳಿದರಲ್ಲದೆ, ಕಲ್ಮಡ್ಕದಿಂದ ಬೆಳಗ್ಗೆ 8.30 ಕ್ಕೆ ಹೊರಡುವ ಬಸ್ ಸ್ಥಗಿತವಾಗಿದೆ ಎಂದು ಸದಸ್ಯೆ ಭವಾನಿ ಹೇಳಿದರೆ, ಮಡಪ್ಪಾಡಿ ಗ್ರಾಮದ ಬಸ್ ಸಮಸ್ಯೆ ಕುರಿತು ಸೋಮಶೇಖರ್ ಕೇವಳರು ಸಭೆಯಲ್ಲಿ ಪ್ರಸ್ತಾಪಿಸಿದರು. ತಾವು ಪ್ರಸ್ತಾಪಿಸಿದ ಸಮಸ್ಯೆಗಳ ಕುರಿತು ಕೆ.ಎಸ್‌.ಆರ್.ಟಿ.ಸಿ. ಅಧಿಕಾರಿಗಳುಗೆ ಬರೆಯುವುದಾಗಿ ಅಧ್ಯಕ್ಷ ಶಾಹುಲ್ ಹಮೀದ್ ಭರವಸೆ ನೀಡಿದರು.