ಗುತ್ತಿಗಾರು ಗ್ರಾಮದ ಬಳ್ಳಕ್ಕ ನಿವಾಸಿ ಎಂ.ಜಿ ವೆಂಕಟ್ರಮಣ ಭಟ್ ರವರಿಗೆ ಡಿ. 27,28 ಮತ್ತು 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ವೇದರತ್ನ ಪ್ರಶಸ್ತಿ ಲಭಿಸಿದೆ. ಬಳ್ಳಕ್ಕ ಶ್ರೀಮತಿ ಸತ್ಯವತಿ ಮತ್ತು ಮಂಜುಳಗಿರಿ ಗಣಪತಿ ಭಟ್ಟರ ಪುತ್ರರಾಗಿರುವ ವೆಂಕಟ್ರಮಣ ಭಟ್ಟರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೂತ್ಕುಂಜ ಪ್ರಾಥಮಿಕ ಶಾಲೆಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ಪಂಜ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಡೆದು 1982 ರಲ್ಲಿ ಸಾಗರ ತಾಲೂಕು ಶ್ರೀಧರ ಸಾಂಗ ವೇದ ವಿದ್ಯಾಲಯ ವರದಪುರದಲ್ಲಿ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ ಶಿಷ್ಯರಾಗಿ ವೇದಭ್ಯಾಸವನ್ನು ಆರಂಭಿಸಿದರು. ಸುಮಾರು 6 ವರ್ಷಗಳ ಕಾಲ ಕೃಷ್ಣ ಯಜುರ್ವೇದ, ಪೂರ್ವಪರ ಪ್ರಯೋಗ, ಸಾಹಿತ್ಯ, ಸಂಸ್ಕೃತ ಅಭ್ಯಾಸವನ್ನು ಪೂರೈಸಿ 8 ವರ್ಷ ವಸಂತ ವೇದ ಶಿಬಿರವನ್ನು ವಿಟ್ಲ, ಕಾಂಚೋಡು, ಕೋಟೆ ದೇವಸ್ಥಾನಗಳಲ್ಲಿ ನಡೆಸಿರುತ್ತಾರೆ. ಮೂರು ದಶಕಗಳಿಂದ ಊರಲ್ಲಿ ಪೌರೋಹಿತ್ಯ ಜೀವನವನ್ನು ನಡೆಸುತ್ತಾ ಜನಾನುರಾಗಿಯಾಗಿ ಇವರು ಪತ್ನಿ ಶ್ರೀಮತಿ ವಾಣಿ ವಿ. ಭಟ್, ಪುತ್ರ ಗಣೇಶ್ ಕೃಷ್ಣ, ಪುತ್ರಿ ಸೌಜನ್ಯ ಹರಿಕಿಸನ್ ಹಾಗೂ ತಂದೆ ತಾಯಿಯವರೊಂದಿಗೆ ಜೀವನ ನಡೆಸುತ್ತಿದ್ದಾರೆ.