ಸುಳ್ಯ ತಾಲೂಕು ಕಚೇರಿಯಲ್ಲಿ ದಲಿತ ಕುಟುಂಬದ ಪ್ರತಿಭಟನೆ

0

ಪ್ರತಿಭಟನಾಕಾರರ ಮನವೊಲಿಸುವಲ್ಲಿ ಎಸ್‌ಐ ಸಫಲ

ಮತ್ತೆ ಬೆಳಗ್ಗೆ ಬಂದು ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿ ತೆರಳಿದ ಕುಟುಂಬ

ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ, ಪಲಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರ ಎಂಬವರ ಜಮೀನನ್ನು ಸ್ಥಳೀಯ ನಿವಾಸಿ ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿ ಬಡ ದಲಿತ ಕುಟುಂಬಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಜ. ೨ ರಂದು ರಾತ್ರಿ ಸುಳ್ಯ ತಾಲೂಕು ಕಚೇರಿ ಆವರಣದಲ್ಲಿ ದಲಿತ ಕುಟುಂಬದ ಸದಸ್ಯರು ಮತ್ತು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಮುಖಂಡರುಗಳು ಪ್ರತಿಭಟನೆಗೆ ಕುಳಿತುಕೊಂಡಿದ್ದರು.

ಮಿನಿಸೌಧದ ಒಳಭಾಗದಲ್ಲಿ ತಹಶೀಲ್ದಾರ್ ರವರ ಕಚೇರಿಯ ಮುಂಭಾಗ ರಾತ್ರಿ ಸುಮಾರು ೮ ಗಂಟೆವರೆಗೆ ಧರಣಿ ಕುಳಿತಿದ್ದು, ನ್ಯಾಯ ಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.


ಈ ವೇಳೆ ತಹಶೀಲ್ದಾರ್ ಮಂಜುಳಾ ರವರು ಮತ್ತು ಪೊಲೀಸ್ ಸಿಬ್ಬಂದಿಗಳು ಬಂದು ರಾತ್ರಿ ಸಮಯ ಕಚೇರಿಯ ಒಳಭಾಗದಲ್ಲಿ ಯಾರು ಕೂಡ ನಿಲ್ಲುವಂತಿಲ್ಲ. ಏನೇ ಸಮಸ್ಯೆ ಇದ್ದರು ಬೆಳಿಗ್ಗೆ ಕಚೇರಿಯ ಕೆಲಸದ ಸಮಯಕ್ಕೆ ಬನ್ನಿ. ಈಗ ಇಲ್ಲಿಂದ ತೆರಳಬೇಕೆಂದು ಸೂಚನೆ ನೀಡಿದರು.


ಆದರೆ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಡದೆ ಮಿನಿಸೌಧದಿಂದ ಹೊರಗಡೆ ಬಂದು ಗೇಟಿನ ಬಳಿ ಕುಳಿತು ಮತ್ತೆ ಪ್ರತಿಭಟನೆಯನ್ನು ಮುಂದುವರೆಸಿದರು.

ಈ ವೇಳೆ ತಹಶೀಲ್ದಾರ್ ಮತ್ತು ಗಿರಿಧರ್ ನಾಯ್ಕ ರವರ ನಡುವೆ ಮಾತುಗಳು ನಡೆದು ಇಲ್ಲಿಂದ ತೆರಳುವ ಮಾತೇ ಇಲ್ಲ. ನಾವು ಇಲ್ಲಿ ಕೂರುವುದರಿಂದ ಸಮಸ್ಯೆ ಇದ್ದರೆ ಇಲ್ಲಿ ಸುಳ್ಯದಲ್ಲಿ ಲಾಡ್ಜ್ ನಲ್ಲಿ ವ್ಯವಸ್ಥೆ ಮಾಡಿಕೊಡಿ. ಈ ರಾತ್ರಿ ಸಮಯ ನಮ್ಮ ಮನೆಗಳಿಗೆ ಹೋಗಲು ಸಾಧ್ಯವಿಲ್ಲ. ನಾವು ರಾತ್ರಿ ಲಾಡ್ಜ್ ನಲ್ಲಿ ನಿಂತು ಮತ್ತೆ ಬೆಳಿಗ್ಗೆ ಬರುತ್ತೇವೆ ಎಂದು ಪಟ್ಟು ಹಿಡಿದರು. ಅದಕ್ಕೆ ಏನೂ ಉತ್ತರಿಸದ ತಹಶೀಲ್ದಾರ್ ಅಲ್ಲಿಂದ ತೆರಳಿದರು.

ಬಳಿಕ ರಾತ್ರಿ ಸುಮಾರು ೮.೪೫ ಕ್ಕೆ ಸ್ಥಳಕ್ಕೆ ಬಂದ ಎಸ್ ಐ ಸಂತೋಷ್ ರವರು ಗಿರಿಧರ ನಾಯ್ಕ ರವರ ಬಳಿ ಮನವಿ ಮಾಡಿ ರಾತ್ರಿ ವೇಳೆ ವೃದ್ಧ ಮಹಿಳೆಯರನ್ನು ಈ ಚಳಿಯ ಸಮಯ ಇಲ್ಲಿ ಕೂರಿಸುವುದು ಸರಿಯಲ್ಲ. ಅಲ್ಲದೆ ಇದು ಕಚೇರಿಯ ಪರಿಸರ ಆದ ಕಾರಣ ಇಲ್ಲಿಂದ ತೆರಳಬೇಕು ಮತ್ತು ಏನಾದರೂ ಮಾತಾಡಲು ಇದ್ದರೆ ಬೆಳಿಗ್ಗೆ ಬಂದು ಕಚೇರಿ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.


ಇದಕ್ಕೆ ಒಪ್ಪಿಕ್ಕೊಂಡ ಗಿರಿಧರ್ ನಾಯ್ಕರವರು ನಿಮ್ಮ ಮಾತಿಗೆ ಬೆಲೆ ನೀಡಿ ಸಧ್ಯಕ್ಕೆ ಇಲ್ಲಿಂದ ಈಗ ತೆರಳುತ್ತೇವೆ. ಮತ್ತೆ ನಾಳೆ ಬೆಳಿಗ್ಗೆ ೯ ಗಂಟೆಗೆ ಮತ್ತೆ ಬಂದು ನಾವು ಇಲ್ಲಿ ಕೂರುತ್ತೇವೆ. ಎಲ್ಲಾದರೂ ನಾಳೆ ನಮಗೆ ನ್ಯಾಯ ಸಿಗದೇ ಹೋದರೆ ಮತ್ತೆ ನಾವು ಯಾವುದೇ ಅಧಿಕಾರಿಗಳ ಮಾತನ್ನು ಕೇಳುವುದಿಲ್ಲ ಮತ್ತು ಎಷ್ಟೇ ರಾತ್ರಿಯಾದರು ನಾವು ಈ ಜಾಗ ಬಿಟ್ಟು ಹೋಗುವುದೂ ಇಲ್ಲ ಎಂದು ಹೆಚ್ಚರಿಕೆಯನ್ನು ನೀಡಿ ಅಲ್ಲಿಂದ ತೆರಳಿದರು.