ರಾತ್ರಿಯೂ ಮುಂದುವರಿದ ತಾಲೂಕು ಕಚೇರಿ ಆವರಣದಲ್ಲಿ ದಲಿತ ಕುಟುಂಬ ಹಮ್ಮಿಕೊಂಡಿರುವ ಪ್ರತಿಭಟನೆ

0

ಚಳಿಯನ್ನೂ ಲೆಕ್ಕಿಸದೆ ತಾಲೂಕು ಕಚೇರಿ ಅಂಗಳದಲ್ಲಿಯೇ ನಿದ್ರಿಸಿದ ಕುಟುಂಬ

ಪಂಬೆತ್ತಾಡಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರ ಎಂಬವರ ಜಮೀನನ್ನು ಸ್ಥಳೀಯ ನಿವಾಸಿ ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು ಪ್ರತಿಭಟನಾ ಕಾರರು ಚಳಿಯನ್ನು ಲೆಕ್ಕಿಸದೆ ತಾಲೂಕು ಕಚೇರಿಯ ಆವರಣದಲ್ಲಿಯೇ ನಿದ್ರಿಸಿ ರಾತ್ರಿ ಕಳೆದಿದ್ದಾರೆ.

ಪ್ರತಿಭಟನೆಯಲ್ಲಿ ಆರಕ್ಕೂ ಹೆಚ್ಚು ಮಂದಿ ಇದ್ದು ಅದರಲ್ಲಿ ೬೦,೭೦ ವರ್ಷದ ವೃದ್ದ ಮಹಿಳೆಯರು ಕೂಡ ಇದ್ದಾರೆ. ಮೈಗೆ ಹೊದಿಸಿಕೊಳ್ಳಲು ಹೊದಿಕೆ ಅಥವಾ ಕಂಬಳಿ ಏನು ಇಲ್ಲದೆ ರಾತ್ರಿ ಅಲ್ಲೇ ಕಳೆದಿದ್ದಾರೆ.
ಇವರ ಜಮೀನನ್ನು ಅಕ್ರಮ ಮಂಜೂರು ಮಾಡಿಕೊಂಡು ದಲಿತ ಕುಟುಂಬಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಈ ಕುಟುಂಬವು ರಾತ್ರಿ ಹಗಲು ಎನ್ನದೇ ತಾಲೂಕು ಕಚೇರಿಯ ಆವರಣದಲ್ಲಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದೆ.

ಕಳೆದ ೩ ದಿನಗಳಿಂದ ಈ ಪ್ರತಿಭಟನೆಯು ನಡೆಯುತ್ತಿದ್ದು ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇಲ್ಲಿಗೆ ಬಂದು ಇವರ ಸಮಸ್ಯೆಯನ್ನು ವಿಚಾರಿಸಿಲ್ಲ ಎಂಬ ಆರೋಪವೂ ಕೂಡ ಕೇಳಿಬಂದಿದೆ.
ಅದರ ನಡುವೆ ನಮಗೆ ಏನಾದರೂ ಆದರೆ ಅದಕ್ಕೆ ಸಂಪೂರ್ಣ ಹೊಣೆಗಾರಿಕೆ ಅಧಿಕಾರಿಗಳೇ ಎಂದು ಪ್ರತಿಭಟನಾಕಾರರು ಎಚ್ಚರಿಕೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಮುಂದೆ ಈ ಪ್ರತಿಭಟನೆಯೂ ಯಾವ ಹಂತಕ್ಕೆ ಬಂದು ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.