ಬಸ್ಸಿನಿಂದ ವಿದ್ಯಾರ್ಥಿ ರಸ್ತೆ ಗೆಸೆಯಲ್ಪಟ್ಟ ಕುರಿತು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು, ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಾಗಿ ತಿಳಿದು ಬಂದಿದೆ.
2019 ಆ.24ರಂದು ಘಟನೆ ನಡೆದಿದ್ದು ಆಪಾದಿತರಾದ ವಿಷ್ಣು ಕುಮಾರ್ ಮತ್ತು ವಿಜಯಕುಮಾರ್ ರವರು ಕೆಎಸ್ ಆರ್ ಟಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರಾಗಿದ್ದು ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಸಂಚರಿಸುವ ವೇಳೆ ನಿರ್ಲಕ್ಷ್ಯತನದಿಂದ ಬಸ್ಸಿನ ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ದ್ವಾರದ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸದೆ, ಆಪಾದಿತರಾದ ವಿಷ್ಣು ಕುಮಾರ್ ರವರು ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಸಂಜೆ 5.20 ಗಂಟೆಗೆ ಕಡಬ ತಾಲೂಕು ಬೆಳಂದೂರು ಗ್ರಾಮದ ಬೆಳಂದೂರು ಎಂಬಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮಹಮ್ಮದ್ ಅಫೀಸ್ ರಸ್ತೆಗೆ ಎಸೆಯಲ್ಪಟ್ಟು ಮುಖಕ್ಕೆ ,ತಲೆಗೆ , ಕಾಲಿಗೆ , ರಕ್ತ ಬರುವ ಹಾಗೂ ಗುದ್ದಿದ ಗಂಭೀರ ಸ್ವರೂಪದ ಗಾಯಗಳುಂಟಾಗಲು ಕಾರಣರಾಗಿರುತ್ತಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಅರ್ಪಿತಾರವರು ಆರೋಪಿಗಳ ಅಪರಾಧ ಸಾಬೀತಾಗಿ ಅವರನ್ನು ದೋಷಿ ಎಂದು ದಿನಾಂಕ 31.12.2024 ರಂದು ಘೋಷಿಸಿ, ಒಂದನೇ ಆರೋಪಿಗೆ ಕಲಂ 279 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹವಾಸ ಮತ್ತು ರೂ. 1000/- ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ, ಕಲಂ 338 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹವಾಸ ಮತ್ತು ರೂ. 1000/- ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ, ಎರಡನೇ ಆರೋಪಿಗೆ ಕಲಂ 336 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹವಾಸ ಮತ್ತು ರೂ. 250/- ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ, ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗತಕ್ಕದ್ದು ಎಂದು ಆದೇಶಿಸಿರುತ್ತಾರೆ.
ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿದ್ದರು.