ಸುಳ್ಯ ‘ಸಂಧ್ಯಾರಶ್ಮಿ’ ಯಲ್ಲಿ ರಾಷ್ಟ್ರಕವಿ ಡಾ|| ಕುವೆಂಪು ಜನ್ಮ ದಿನಾಚರಣೆ

0

ಕುವೆಂಪು ಈ ಜಗದ ಸೋಜಿಗ. ಬಹುಷ: ಅವರ 'ವಿಶ್ವಮಾನವ ತತ್ವ' ಕುರಿತಾಗಿ ಆದಷ್ಟು ಚರ್ಚೆ ಬೇರೆ ಯಾವ ಸಾಹಿತಿಯ ಬಗ್ಗೆಯೂ ನಡೆದಿಲ್ಲ. ಕನ್ನಡಕ್ಕೆ ಪ್ರಪ್ರಥಮ 'ಜ್ಞಾನಪೀಠ' ಪ್ರಶಸ್ತಿ ತಂದುಕೊಟ್ಟ ಈ ಪ್ರಥಮ 'ರಾಷ್ಟ್ರಕವಿ, ಮುದ್ರಿತ ೪೦,೦೦೦ ಪುಟಗಳಿಗಾಗುವಷ್ಟು ಕವನ, ಕತೆ, ಲೇಖನ, ವಿಮರ್ಷೆ, ನಾಟಕ, ಕಾದಂಬರಿಗಳನ್ನು (69ಕೃತಿಗಳು) ಬರೆದವರು- ಅದೂ ಆಧುನಿಕ ಸೌಲಭ್ಯಗಳಾದ ಫ್ಯಾನು, ಫೋನು, ಇಂಟರ್ನೆಟ್ಟು, ವಾಟ್ಸಪ್, ವಿದ್ಯುತ್ ಬೆಳಕು, ಯಾಕೆ ಬಾಲ್ ಪೆನ್ ಕೂಡಾ ಲಭ್ಯವಿಲ್ಲದ ಆ ಕಾಲದಲ್ಲಿ! ಅವರ ವಿದ್ವತ್ ಜೀವನವು ಸರಳವಾಗಿದ್ದು, ಈಗಿನ ಯುವ ಜನಾಂಗಕ್ಕೆ ದಾರಿದೀಪವಾಗಿದೆ ಎಂದು ಸುಳ್ಯದ ನಿವೃತ್ತ ಸಿ.ಡಿ.ಪಿ.ಒ., ಸಾಹಿತಿ, 'ಸ್ಪಂತಿಕಾ ಸಾಹಿತ್ಯ-ಸಾಂಸ್ಕೃತಿಕ ಬಳಗದ ಅಧ್ಯಕ್ಷ ನೀರಬಿದಿರೆ ನಾರಾಯಣ ಸುಳ್ಯ (ನೀನಾಸು) ನುಡಿದರು.


ಅವರು ದ. 29ರಂದು ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ಜರುಗಿದ 'ಕುವೆಂಪು' ಜನ್ಮ ದಿನಾಚರಣೆ-2024 ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಸ್ವಂತಿಕಾ ಸಾಹಿತ್ಯ-ಸಾಂಸ್ಕೃತಿಕ ಬಳಗ, ಸುಳ್ಯ, ಚಂದನಾ ಸಾಹಿತ್ಯ ವೇದಿಕೆ ಸುಳ್ಯ, 'ಸಂಧ್ಯಾರಶ್ಮಿ ಸಾಹಿತ್ಯ ಸಂಘ, ಸುಳ್ಯ - ಸಹಯೋಗದಲ್ಲಿ ಕುವೆಂಪು ಜನ್ಮದಿನಾಚರಣೆ-೨೦೨೪ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


'ನೀನಾಸು' ಅವರ ಸಾಹಿತಿಗಳ ಪರಿಚಯಾತ್ಮಕ ಕೃತಿ 'ಸಾಹಿತಿ-ಮಾಹಿತಿ' (ಪರಿಷ್ಕೃತ) ಹಾಗೂ 'ಅವರವರ ಭಾವಕ್ಕೆ - (ಭಾಗ೨) (ನೀನಾಸು ಚಿಂತನಗಳು); ಅಜ್ಜಾವರ ದೇವರಕಳಿಯ ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ (ಚೈತನ್ಯ ಸ್ವಾಮಿ) ಇವರ 'ಆದರ್ಶ ವಿದ್ಯಾರ್ಥಿ' ಹಾಗೂ ಲೇಖಕಿ, ಸಾಹಿತಿ ಶ್ರೀಮತಿ ಲೀಲಾ ದಾಮೋದರ್‌ರವರ ಕವನ ಸಂಕಲನ 'ನದಿಯ ನಾದ' ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಹಿರಿಯ ನಾಗರಿಕರಾದ  ಗೋಪಾಲ ಭಸ್ಮಡ್ಕ ಹಾಗೂ ಸಂಘದ  ಗೌರವಾಧ್ಯಕ್ಷ ಎ. ಬಾಬು ಗೌಡ ಅಚ್ರಪ್ಪಾಡಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.


ನಿವೃತ್ತ ಶಿಕ್ಷಕಿ ಶ್ರೀಮತಿ ಎಂ.ವಿ. ಗಿರಿಜಾ ಆಶಯಗೀತೆ ಹಾಡಿದರು. ಶ್ರೀ ಸ್ವಾಮೀಜಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ನೀನಾಸು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಚಂದನಾ ಸಾಹಿತ್ಯ ವೇದಿಕೆ ಅಧ್ಯಕ್ಷ, ಸಾಹಿತಿ ಹಾಗೂ ಜ್ಯೋತಿಷಿ ಭೀಮರಾವ್ ವಾಷ್ಠರ್, 'ಸಂಧ್ಯಾರಶ್ಮಿ ಸಾಹಿತ್ಯ ಸಂಘ' ಅಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ್, ಸಂಘದ ಅಧ್ಯಕ್ಷ ಡಾ| ಎಸ್. ರಂಗಯ್ಯ, ಚೈತನ್ಯ ಸ್ವಾಮೀಜಿ ಕುವೆಂಪು ಕುರಿತು ಮಾತನಾಡಿದರು.

ಕುವೆಂಪು ವಿರಚಿತ ಗಾಯನ ಸ್ಪರ್ಧೆಗೆ ಶ್ರೀಮತಿ ಎಂ. ವಿ. ಗಿರಿಜಾ, ನಿವೃತ್ತ ಶಿಕ್ಷಕಿ ಹಾಗೂ ಗಾಯಕಿ, ಶ್ರೀಮತಿ ಗೀತಾ ಸರಸ್ವತಿ ಎಂ., ತೀರ್ಪುಗಾರರಾಗಿದ್ದರು. ವಿಜೇತರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಪುಸ್ತಕ ರೂಪದ ಬಹುಮಾನ ನೀಡಲಾಯಿತು. ಸಂಘದ ಖಜಾಂಜಿ  ಎಂ. ಸುಬ್ರಹ್ಮಣ್ಯ ಹೊಳ್ಳರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.