ಸ್ಥಳಕ್ಕೆ ನ.ಪಂ. ಸದಸ್ಯ ಎಂ.ವಿ.ಜಿ. ಭೇಟಿ : ಇಂಜಿನಿಯರ್, ಮುಖ್ಯಾಧಿಕಾರಿಗಳಿಗೆ ತರಾಟೆ – ತಕ್ಷಣವೇ ನೀರು ಸರಬರಾಜಿಗೆ ಸೂಚನೆ
ಸುಳ್ಯ ಗುರುಂಪಿನಲ್ಲಿ ನೀರು ಸರಬರಾಜು ಕಾಮಗಾರಿ ನಡೆಯುತ್ತಿರುವ ಪರಿಣಾಮ ಆ ವಾರ್ಡ್ ಗೆ ಮೂರು ದಿನಗಳಿಂದ ನೀರು ಸರಬರಾಜಾಗದೇ ಜನರಿಗೆ ಸಮಸ್ಯೆಯಾಗುತ್ತಿರುವುದನ್ನು ಅರಿತ ವಾರ್ಡ್ ಸದಸ್ಯ ಎಂ.ವೆಂಕಪ್ಪ ಗೌಡರು ಸ್ಥಳಕ್ಕೆ ಭೇಟಿ ನೀಡಿದರಲ್ಲದೇ, ನ.ಪಂ. ಮುಖ್ಯಾಧಿಕಾರಿ, ಕಾಮಗಾರಿ ಇಂಜಿನಿಯರ್ ರನ್ನು ಸ್ಥಳಕ್ಕೆ ಕರೆಸಿ ತರಾಟೆಗೆತ್ತಿಕೊಂಡರಲ್ಲದೆ, ತಕ್ಷಣ ನೀರು ಸರಬರಾಜಿಗೆ ಸೂಚನೆ ನೀಡಿರುವ ಘಟನೆ ವರದಿಯಾಗಿದೆ.
ಗುರುಂಪು ಪ್ರದೇಶದಲ್ಲಿ ನೀರು ಕಾಮಗಾರಿ ಗೆ ರಸ್ತೆ ಅಗೆಯಲಾಗಿದ್ದು ಹಳೆ ಪೈಪ್ ಲೈನ್ ತುಂಡಾಗಿ ನೀರು ಸರಬರಾಜಿನಲ್ಲಿ ವ್ಯತ್ಯಯ ವಾಗಿದೆ. ಗುರುಂಪು ವಾರ್ಡ್ ಗೆ ನೀರು ಇಲ್ಲದೇ ಮೂರು ದಿನವಾಯಿತೆಂದು ಆ ಭಾಗದವರು ದೂರಿಕೊಂಡಿದ್ದರು. ಇಂದು ಸಂಜೆ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ನಡೆಸಿದ ವೆಂಕಪ್ಪ ಗೌಡರು ಕಾಮಗಾರಿ ಇಂಜಿನಿಯರ್ ರನ್ನು ಸ್ಥಳಕ್ಕೆ ಬರಮಾಡಿಕೊಂಡು, ಕಾಮಗಾರಿ ನಡೆಸುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಜನರಿಗೆ ಸಮಸ್ಯೆ ಆಗಬಾರದು. ಮೂರು ದಿನದಿಂದ ನೀರು ಇಲ್ಲವೆಂದಾದರೇ ಹೇಗೆ ? ಎಂದು ತರಾಟೆಗೆತ್ತಿಕೊಂಡ ಅವರು, ತಕ್ಷಣವೇ ರಸ್ತೆ ಅವ್ಯವಸ್ಥೆ ಸರಿಪಡಿಸಿ, ನೀರು ಸರಬರಾಜು ಆಗಬೇಕು. ಒಂದು ವೇಳೆ ಆಗದಿದ್ದರೆ ಜ.8 ರ ಪ್ರತಿಭಟನೆಯಲ್ಲಿ ಭಾಗವಹಿಸಿ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮುಖ್ಯಾಧಿಕಾರಿ ಯವರು ಕಾಮಗಾರಿ ನೋಡಿಕೊಂಡು ಜಬರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರೆಂದು ತಿಳಿದುಬಂದಿದೆ.