ಸಕಲೇಶಪುರ ಕಡೆಯಿಂದ ಬಸ್ಸಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳೊಡನೆ ಬಸ್ಸಲ್ಲಿ ಅನುಚಿತವಾಗಿ ವರ್ತಿಸಿದ ಯುವಕನೊಬ್ಬನನ್ನು ಪೈಚಾರಲ್ಲಿ ಬಸ್ಸಿಂದಿಳಿಸಿ ಕಾರಲ್ಲಿ ಸುಳ್ಯ ಬಸ್ ನಿಲ್ದಾಣದ ವರೆಗೆ ಕರೆತಂದು ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿರುವ ಐವರು ಯುವಕರ ಮೇಲೆ ಸುಳ್ಯ ಪೋಲೀಸರು ದಾಖಲಿಸಿರುವ ಕೇಸಿಗೆ ಹೈಕೋರ್ಟು ತಡೆಯಾಜ್ಞೆ ನೀಡಿದೆ.
23.9.2024 ರಂದು ಬೆಳಿಗ್ಗೆ ಸಕಲೇಶಪುರದ ಕೂಡುರಸ್ತೆ ಎಂಬಲ್ಲಿಂದ ಸುಳ್ಯದಲ್ಲಿರುವ ಕಾಲೇಜಿಗೆ ಬೆಂಗಳೂರು – ಸುಬ್ರಹ್ಮಣ್ಯ – ಸುಳ್ಯ ಬಸ್ಸಲ್ಲಿ ವಿದ್ಯಾರ್ಥಿನಿ ಹೊರಟಿದ್ದಳು. ಬಸ್ಸು ಕುಲ್ಕುಂದ ಸಮೀಪ ತಲಪುವಾಗ ತನ್ನ ಪಕ್ಕದ ಸೀಟಲ್ಲಿ ಕುಳಿತಿದ್ದ ಮಂಜೇಶ್ವರ ಕಡೆಯ ನಿಯಾಜ್ ಎಂಬ ಯುವಕ ಇವಳೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ವಿಷಯ ತಿಳಿದ ಆಕೆ ಕಲಿಯುತ್ತಿದ್ದ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಮತ್ತು ಹಿಂದೂ ಸಂಘಟನೆಯ ಕೆಲವು ಯುವಕರು ಸೇರಿ, ಆತ ಸುಬ್ರಹ್ಮಣ್ಯದಿಂದ ಬೇರೊಂದು ಬಸ್ಸಲ್ಲಿ ಬರುತ್ತಿರುವುದನ್ನು ತಿಳಿದು ಪೈಚಾರಲ್ಲಿ ಕಾದುಕುಳಿತು, ಆತ ಬಸ್ಸಿಂದ ಇಳಿಯುತ್ತಿದ್ದಂತೆ ಕಾರಲ್ಲಿ ಕೂರಿಸಿಕೊಂಡು ಸುಳ್ಯ ಬಸ್ ನಿಲ್ದಾಣಕ್ಕೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದರು.
ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷಿತ್, ಮಿಥುನ್, ಸುಶ್ಮಿತ್, ಹರ್ಷಿತ್ ಮತ್ತು ವಿಜೇತ್ ಎಂಬವರ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಕೇಸಿನ ವಿಚಾರಣೆಗೆ ಇದೀಗ ರಾಜದಯ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದಾಗಿ ತಿಳಿದು ಬಂದಿದೆ.