ನಮಸ್ಕಾರ ನಿನಗೆ ಭಾಸ್ಕರ

0

ಮಕರ ರಾಶಿಯ ಕಡೆಗೆ ಮುಖ ಮಾಡಿದ ನೇಸರ
ಮಾನವನ ಅಂಧಕಾರವ ನೀಗಿಸೊ ಆತುರ
ಮಿಡಿಯುತ್ತಿದೆ ಮನ ಎಳ್ಳು-ಬೆಲ್ಲವ ಮೆಲ್ಲಲು
ಮೀಟುತಿದೆ ಹೃದಯರಾಗ ದ್ವೇಷವ ಮರೆಸಲು!

ಮುಸುಕಿನ ಮಬ್ಬಿನೊಳು ಜಡ ತೊರೆಯೊ ಕಾತರ
ಮೂರು ಜಗದೊಡೆಯ ನೀ ಬೆಳಗು ದಿನಕರ
ಮೃದುವಾಗಿ ನೀ ಬಾರೋ ಮುಂಜಾನೆಯ ನಮಸ್ಕಾರ
ಮೆರೆವ ಸಂಕ್ರಾಂತಿಯಲಿ ಗುರಿ ತೋರೋ ಗುಣಾಕರ!

ಮೇರು ವ್ಯಕ್ತಿತ್ವದಲಿ ನೀನಿರೋ ಭಾಸ್ಕರ
ಮೈ ಸುಡುವ ಬೇಸಗೆಯ ನಾ ಒಲ್ಲೆ ಚತುರ
ಮೊಗ್ಗಿನ ಮನಸ್ಸಿದು ಓ ಭಾನು ದೊರೆಯೇ
ಮೋಸ ಮಾಡದಿರು ನೀ ಭಾರಿ ಮೋಡಿಗಾರ!

ಮೌನ ತಾಳದಿರು,ಮೌಢ್ಯತೋರದಿರು
ಮೌಲ್ಯವಿದೆ ಜೀವಕೆ, ಹಸುಳೆಯ ಸ್ವಾಸ್ಥ್ಯಕೇ
ಮಂಗಳಾಂಗನೆ ನಿನಗೆ ಮಂಗಳಾರತಿಯ ಮಾಳ್ಪೆ
ಮಹನೀಯನು ನೀನೇ ನಮ್ಮ ಕಾಯೋ ಕರುಣಾಕರ!

  • ಶ್ರೀಮತಿ ಸರಿತಾ ಪ್ರವೀಣ್
    ರೋಟರಿ ಪದವಿಪೂರ್ವ ಕಾಲೇಜು ಸುಳ್ಯ.