ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಟಕರ ಶ್ರಮ ಹಾಗೂ ಜನರ ಸಹಕಾರ ಶ್ಲಾಘನೀಯ :ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರಶೋಲ
ಶಿಕ್ಷಣ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ. ಶಿಕ್ಷಣಕ್ಕೆ ಮಹತ್ವವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಿದ್ದಲ್ಲಿ ಅವರು ಉತ್ತಮ ಪ್ರಜೆಯಾಗಲು ಮತ್ತು ಹೆತ್ತವರಿಗೆ ಉತ್ತಮ ಮಕ್ಕಳಾಗಿರಲು ಸಾಧ್ಯವಾಗುತ್ತದೆ. ಅದೇ ರೀತಿ ಮಕ್ಕಳು ಕೂಡ
ತಾಯಿ ತಂದೆಯನ್ನು ಗೌರವಿಸಿ ,ಅವರ ಪ್ರೀತಿ ಸ್ನೇಹ,ತ್ಯಾಗವನ್ನು ಅರಿತು ಕೊಂಡಲ್ಲಿ ಇಡೀ ಸಮಾಜ ಮತ್ತು ಅವರ ಹೆತ್ತವರು ಸುಖ ದಿಂದಿರಬಹುದು ಎಂದು ಮರ್ಕಝ್ ಗೂಡಲ್ಲೂರು ಪ್ರಾಂಶುಪಾಲರಾದ ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರಶೋಲ ಹೇಳಿದ್ದಾರೆ.
ಅವರು ಬೆಳ್ಳಾರೆಯಲ್ಲಿ ಕಳೆದ ಒಂದು ದಶಕಗಳಿಂದ ಶಿಕ್ಷಣ ಸಂಸ್ಥೆಯಾಗಿ ಕಾರ್ಯಚರಿಸುತ್ತಿರುವ ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ಹಿಫ್ಲ್ ಹಾಗೂ ದರ್ಸ್ ವಿದ್ಯಾರ್ಥಿಗಳ ಮೇಲಂತಸ್ತಿನ ಹಾಸ್ಟೆಲ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಪ್ರಭಾಷಣದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬ ತಂದೆ ತಾಯಿಯರಿಗೂ ಕೂಡ ಮಕ್ಕಳೇ ಸರ್ವಸ್ವ.ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಅಮೂಲ್ಯ ಸಂಪತ್ತನ್ನಾಗಿಸಲು ಪ್ರತಿಯೊಬ್ಬ ತಂದೆ ತಾಯಿಯರು ಕಂಡಿರುವ ಕನಸು ಗಳಾಗಿರುತ್ತದೆ. ಇಂತಹ ಕನಸುಗಳನ್ನು ನನಸು ಮಾಡುವುದು ಮಕ್ಕಳ ಕರ್ತವ್ಯವೂ ಕೂಡ ಆಗಿರುತ್ತದೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಖುರಾನ್ ಶಿಕ್ಷಣ ಪಡೆದು ಕಂಠಪಾಠ ಮಾಡಿ ಅವರಿಗೆ ಸನುದುದಾನ ನೀಡುತ್ತಿರುವುದು ಅತೀವ ಸಂತೋಷವಾಗುತ್ತಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಈ ಮಕ್ಕಳು ಧಾರ್ಮಿಕ ಶಿಕ್ಷಣಕ್ಕೆ ಒತ್ತು ನೀಡಿರುವುದು ಅಭಿನಂದನೀಯ. ಇವರೆಲ್ಲರಿಗೂ ನಮ್ಮ ಮಕ್ಕಳೆಂಬ ಪ್ರೀತಿಯನ್ನು ನಾವೆಲ್ಲರೂ ನೀಡಬೇಕಾಗಿದೆ ಎಂದರು.
ಇಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣದ ಪ್ರಯತ್ನದಲ್ಲಿ ಮುಂಚೂಣಿಯಲ್ಲಿ ನಿಂತ ಪ್ರಮುಖರ ಹಾಗೂ ಸಹಕರಿಸಿದವರ ಮನಸ್ಸು ಪರಿಶುದ್ದವಾಗಿದೆ.ಹಾಗಾಗಿ ಈ ರೀತಿಯ ಉತ್ತಮ ಕಟ್ಟಡ ತೆಲೆಯೆತ್ತಿನಿಂತಿದ್ದು ಇನ್ನಷ್ಟು ಮಕ್ಕಳಿಗೆ ಇಲ್ಲಿ ಶಿಕ್ಷಣ ಪಡೆಯಲು ಅವಕಾಶಗಳು ಲಭಿಸಲಿ
ಎಂದು ಅವರು ಶುಭಾರೈಸಿದರು.
ಮಾಪಳಡ್ಕ ಮುದರ್ರಿಸ್ ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌದಿ ನ್ಯಾಷನಲ್ ಕಮಿಟಿ ಅಧ್ಯಕ್ಷ ರಶೀದ್ ಬೆಳ್ಳಾರೆ ವಹಿಸಿದ್ದರು.
ಸಯ್ಯದ್ ಕಾಜೂರ್ ತಂಙಳವರ ನೇತೃತ್ವದಲ್ಲಿ ಸಂಸ್ಥೆಯಲ್ಲಿ ಕಲಿತು ಸಂಪೂರ್ಣವಾಗಿ ಖುರಾನ್ ಕಂಠಪಾಠ ಮಾಡಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಸನದುದಾನ ವಿತರಣೆ ನಡೆಯಿತು.
ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಕೋಶಾಧಿಕಾರಿ ಸಾಲಿಹ್ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿ ‘ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಹೊಟ್ಟೆಪ್ಪಾಡಿಗಾಗಿ ದುಡಿಯುವ ನೂರಾರು ನಮ್ಮೂರಿನ ಅನಿವಾಸಿ ಭಾರತೀಯರ ಶ್ರಮದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ. ಅವರೆಲ್ಲರ ಬೆವರ ಹನಿ ಈ ಕಟ್ಟಡದಲ್ಲಿದೆ ಎಂದು ದಾನಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಮುಖಂಡರುಗಳಾದ ಬಿ ಎ ಮಹಮೂದ್ ಬೆಳ್ಳಾರೆ, ಹಸ್ಸನ್ ಸಖಾಫಿ ಬೆಳ್ಳಾರೆ,ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಆಲ್ಫಾ,ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ವಿವಿಧ ಪದಾಧಿಕಾರಗಳು, ಸಯ್ಯದರು,
ಉಲಮಾ ಉಮರಾ ನೇತಾರರು, ಗಲ್ಫ್ ಪ್ರತಿನಿಧಿಗಳು, ಉದ್ಯಮಿಗಳು, ರಾಜಕೀಯ, ಸಾಮಾಜಿಕ ನಾಯಕರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿ ಸ್ವಾಗತಿಸಿ, ಯೂಸುಫ್ ಚೆನ್ನಾರ್ ವಂದಿಸಿದರು. ವಿದ್ಯಾರ್ಥಿ ಸಲ್ಮಾನ್ ಫಾರಿಸ್ ಕಿರಾಅತ್ ಪಠಣ ಮಾಡಿದರು.