ಜ. 29ರ ತನಕ ಅಯ್ಯನಕಟ್ಟೆ ಜಾತ್ರೋತ್ಸವ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ. 26ರಿಂದ ಜ. 29ರ ವರೆಗೆ ವಿಜೃಂಭಣೆಯಿಂದ ಜರಗಲಿದೆ. ಜ. 26ರಂದು ಬೆಳಿಗ್ಗೆ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸನ್ನಿಧಿಯಲ್ಲಿ ಗಣಪತಿ ಹವನ, ನಾಗತಂಬಿಲ, ವಿಶೇಷ ತಂಬಿಲ ನಡೆಯಿತು. ಮೂರುಕಲ್ಲಡ್ಕದಲ್ಲಿ ನಾಗತಂಬಿಲ, ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಬಾಳಿಲ ಶ್ರೀ ಮಂಜುನಾಥೇಶ್ವರ ದ್ವಾರದ ಬಳಿಯಿಂದ ಮೂರುಕಲ್ಲಡ್ಕ ಶ್ರೀ ಉಳ್ಳಾಕುಲು ಸ್ಥಾನದವರೆಗೆ ಹಸಿರುವಾಣಿ ಮೆರವಣಿಗೆ ನಡೆಯಿತು. ಬಳಿಕ ಶ್ರೀರಾಮ ಭಜನಾ ಮಂಡಳಿ ಕಲ್ಮಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಜ. 27ರಂದು ಬೆಳಿಗ್ಗೆ 8.30 ರಿಂದ ಗಣಪತಿ ಹವನ ಸಹಿತ ಚಂಡಿಕಾ ಹವನ ಮತ್ತು ದುರ್ಗಾ ಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಕುಕ್ಕುತ್ತಡಿಯ ಶ್ರೀ ದೈವಗಳ ಬಚ್ಚೆಲ್‌ಕಟ್ಟೆಯಲ್ಲಿ ತಂಬಿಲ ಸೇವೆ ನಡೆಯಲಿದೆ. ಸಂಜೆ 6:45 ರಿಂದ ಕಳಂಜ ಯುವಕ ಮಂಡಲ ಪ್ರವರ್ತಿತ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಕೋಟೆಮುಂಡುಗಾರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕಳಂಜ‌, ಬ್ರಾಹ್ಮರಿ ಮಹಿಳಾ ಭಜನಾ ಮಂಡಳಿ ತಂಟೆಪ್ಪಾಡಿ ಇವರಿಂದ ಮೂರುಕಲ್ಲಡ್ಕದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7:30 ರಿಂದ ಶ್ರೀ ಉಳ್ಳಾಕುಲು ದೈವಕ್ಕೆ ಎಣ್ಣೆಬೂಳ್ಯ ನಡೆಯಲಿದೆ.

ಜ. 28ರಂದು ಪ್ರಾತಃಕಾಲ 5:30ಕ್ಕೆ ಮೂರುಕಲ್ಲಡ್ಕ ದೈವಸ್ಥಾನದಿಂದ ಸಪರಿವಾರ ಶ್ರೀ ಇಷ್ಟದೇವತಾ ಉಳ್ಳಾಕುಲು ಸಪರಿವಾರ ದೈವಗಳ ಹಾಗೂ ತೋಟದ ಮೂಲೆ ಸ್ಥಾನದಿಂದ ರುದ್ರಚಾಮುಂಡಿ ದೈವದ ಕಿರುವಾಲು ಹೊರಟು ಬೆಳಿಗ್ಗೆ 7.00ರಿಂದ ಅಯ್ಯನಕಟ್ಟೆ ಕಲ್ಲಮಾಡದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವದ ಸಿರಿಮುಡಿ ಏರುವುದು, ನರ್ತನ ಸೇವೆ, ಬಟ್ಟಲು ಕಾಣಿಕೆ, ಸಿರಿಮುಡಿ ಗಂಧ ಪ್ರಸಾದ ವಿತರಣೆಯಾಗಿ ತದನಂತರ, ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂದಾಯ ದೈವಗಳ ಕಟ್ಟುಕಟ್ಟಳೆಯ ನೇಮ, ಬೂಳ್ಯ ವಿತರಣೆ ನಡೆಯಲಿದೆ. ಪೂ. 11:30 ರಿಂದ ರುದ್ರಚಾಮುಂಡಿ ದೈವದ ನರ್ತನ ಸೇವೆ, ಬೂಳ್ಯ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ವಿಶ್ರಾಂತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು, ಮುಖ್ಯ ಅಭ್ಯಾಗತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸಿದ್ದಾರೆ. ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ‌ ಮಂಡಳಿ ನಾಗವೃಜ‌ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ಮಾನಿಷಾದ ನಡೆಯಲಿದೆ. ರಾತ್ರಿ 9:00 ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಜ. 29ರಂದು ಬೆಳಿಗ್ಗೆ 7.30 ಕ್ಕೆ ತಂಟೆಪಾಡಿ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಿಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಬಂಡಾರ ಹೊರಡುವುದು ಮತ್ತು ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಬೆಳಿಗ್ಗೆ 10.30ರಿಂದ ಕಲ್ಲಮಾಡದಲ್ಲಿ ಕೊಡಮಣಿತ್ತಾಯ, ಧೂಮಾವತಿ ಮತ್ತು ಶಿರಾಡಿ ದೈವಗಳ ನರ್ತನ ಸೇವೆ, ಬೂಳ್ಯ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ 2.30ರಿಂದ ಕಲ್ಲಮಾಡದಲ್ಲಿ ಶಿರಾಡಿ ದೈವದ ದೊಂಪದ ಬಲಿನೇಮ ನಡೆದು ಮಾರಿ ಹೊರಡಲಿದೆ. ಸಂಜೆಯ ವೇಳೆ ಬೆಳ್ಳಾರೆ ಸಮೀಪದ ತಂಬಿನಮಕ್ಕಿಯ ಗೌರಿಹೊಳೆಯ ಸಮೀಪ ಬಲಿಸಮರ್ಪಣೆಯಾಗಿ ನಾಲ್ಕುದಿನಗಳ ಅಯ್ಯನಕಟ್ಟೆ ಜಾತ್ರೆ ಸಂಪನ್ನಗೊಳ್ಳುಲಿದೆ.