ಧಾರ್ಮಿಕ ಉಪನ್ಯಾಸ – ಸ್ಥಳ ದಾನಿಗಳಿಗೆ ಸನ್ಮಾನ
ಸನಾತನ ಹಿಂದೂ ಧರ್ಮದ ಉಳಿವಿಗೆ ಬಾಲ್ಯದಿಂದಲೇ ಅರಿವು ಮೂಡಿಸಬೇಕು: ಗಣರಾಜ ಭಟ್ ಕೆದಿಲ
ಇಂದು ಶ್ರೀ ದೇವರ ನೃತ್ಯಬಲಿ, ಬಟ್ಟಲು ಕಾಣಿಕೆ

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗೊಳಪಟ್ಟ ರೆಂಜಾಳ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಬಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ.24 ರಿಂದ ಆರಂಭಗೊಂಡಿದ್ದು, ನಿನ್ನೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಉಪನ್ಯಾಸ ನೀಡಿದ ಸಾಮಾಜಿಕ ಕಾರ್ಯಕರ್ತ ಬ| ಗಣರಾಜ್ ಭಟ್ ಕೆದಿಲರವರು ಮಾತನಾಡಿ “ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಪ್ರತಿಯೊಬ್ಬರೂ ಸಂಸ್ಕೃತಿ ಯನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಸಂಸ್ಕೃತಿಯ ಅರಿವು ಮೂಡಿಸಬೇಕು. ಸಂಸ್ಕೃತಿಯುಕ್ತ ಆಚಾರ ವಿಚಾರ ಉಡುಗೆ ತೊಡುಗೆ ಗಳನ್ನು ಮೈಗುಡಿಸಿಕೊಳ್ಳಿ ಧರ್ಮೋ ರಕ್ಷತಿ ರಕ್ಷಿತಃ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಿಕ ಅವಿನ್ ಕುಮಾರ್ ರಂಗತ್ತಮಲೆ ಹಾಗೂ ಸ್ಥಳದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಜೋಗಿಮೂಲೆ, ವ್ಯವಸ್ಥಾಪನ ಸಮಿತಿ ನಿಕಟ ಪೂರ್ವಾಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಗ್ರಾ. ಪಂ. ಅಧ್ಯಕ್ಷೆ ಗೀತಾ ಹೊಸೋಳಿಕೆ, ಅನ್ನಪೂರ್ಣ ಸಮಿತಿ ಅಧ್ಯಕ್ಷ ಚಿನ್ನಪ್ಪ ಗೌಡ ಬೇರಿಕೆ, ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಮಾಸ್ತರ್ ರೆಂಜಾಳ, ಶ್ರೀ ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ, ಜಾತ್ರೋತ್ಸವ ಸಮಿತಿ ಸದಸ್ಯ ಜಗನ್ಮೋಹನ ರೈ ರೆಂಜಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂದು ರಾತ್ರಿ ಶ್ರೀ ದೇವರ ಭೂತಬಲಿ, ಸೇವಾಬಲಿಗಳು, ನೃತ್ಯ ಬಲಿ, ಬಟ್ಟಲು ಕಾಣಿಕೆ
ನಿನ್ನೆ ಸಂಜೆ ತಂತ್ರಿಗಳ ಆಗಮನದ ಬಳಿಕ ಪ್ರಾರ್ಥನೆ, ಪುಣ್ಯಾಹ, ಪ್ರಾಸಾದ ಶುದ್ಧಿ ಬಳಿಕ ವಾಸ್ತು ರಕ್ಷೋಘ್ನ ಹೋಮ ಮತ್ತು ವಾಸ್ತು ಬಲಿ ನಡೆಯಿತು.
ಇಂದು ಬೆಳಿಗ್ಗೆ ಗಣಪತಿ ಹೋಮದ ಬಳಿಕ ಬಿಂಬ ಶುದ್ಧಿ, ಕಲಶ ಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ ನಡೆದು ಸಾನಿಧ್ಯ ಕಲಶ ಪೂಜೆ ಹಾಗೂ ಸಾನ್ನಿಧ್ಯ ಕಲಶಾಭಿಷೇಕ ನಡೆಯಿತು.
ಇಂದು ರಾತ್ರಿ ಪೂಜೆ ಬಳಿಕ 8 ಗಂಟೆಯಿಂದ ಭೂತಬಲಿ, ಸೇವಾಬಲಿಗಳು, ನೃತ್ಯ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮತ್ತು ಸಂಪ್ರೋಕ್ಷಣೆ ಹಾಗೂ ಮಂತ್ರಾಕ್ಷತೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ನಿನ್ನೆ ಸಂಜೆ 5 ರಿಂದ ಮಿತ್ತಡ್ಕ, ದಾಸರಬೈಲು ಮತ್ತು ಬೊಳ್ಳಾಜೆ ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಂದ ಹಾಗೂ ಮಿತ್ತಡ್ಕ, ದಾಸರಬೈಲು, ಬೊಳ್ಳಾಜೆ, ಸೇವಾಜೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ಇಂದು ಸಂಜೆ 5 ರಿಂದ ಸುಳ್ಯ ಬಾಲಕೃಷ್ಣ ಮತ್ತು ತಂಡದವರಿಂದ ಭಜನಾಮೃತ ಕಾರ್ಯಕ್ರಮ ನಡೆಯಲಿದ್ದು, ಊರಿನ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಸಂಜೆ 7 ರಿಂದ ಸಂತೋಷ್ ಮುಂಡೋಕಜೆ ನೇತೃತ್ವದಲ್ಲಿ ಸುಳ್ಯ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ನಡೆಯಲಿದೆ.