ಡಾ.ಚಿದಾನಂದ, ದಾಮೋದರ ಕುಯಿಂತೋಡು, ಎ.ಕೆ.ಹಿಮಕರ ಸೇರಿದಂತೆ ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ

0

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2022 ಮತ್ತು 2023 ನೇ ಸಾಲಿನ ಗೌರವ ಪ್ರಶಸ್ತಿಗಳ ಘೋಷಣೆಯಾಗಿದೆ. ಅರೆಭಾಷೆ ಬೆಳವಣಿಗೆಯಲ್ಲಿ ಗಣನೀಯ ಸಾಧನೆ ಮಾಡಿದ ಆರು ಮಂದಿ ಈ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರು ಈ ಕುರಿತು ಮಾಹಿತಿ ನೀಡಿ, 2022ನೇ ಸಾಲಿನ ಗೌರವ ಪ್ರಶಸ್ತಿಯನ್ನು ‘ಸಂಶೋಧನೆ ಮತ್ತು ಅರೆಭಾಷೆ ಸಾಹಿತ್ಯ’ ಕ್ಷೇತ್ರದ ಸಾಧನೆಗಾಗಿ ಕೊಡಗಿನ ಡಾ.ಕಾವೇರಿಮನೆ ಬೋಜಪ್ಪ, ‘ಅರೆಭಾಷೆ ಮತ್ತು ಸಂಸ್ಕೃತಿಯ ಸೇವೆ’ಗಾಗಿ ತುಂತಜೆ ವೆಂಕಟೇಶ್(ಗಣೇಶ್) ಮತ್ತು ‘ಶಿಕ್ಷಣ ಮತ್ತು ವೈದ್ಯಕೀಯ ಸೇವೆ’ಗಾಗಿ ಸುಳ್ಯದ ಅಕಾಡೆಮಿ ಆಫ್‌ ಲಿಬರಲ್‌ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಪಡೆದುಕೊಂಡಿದ್ದಾರೆ. 2023ನೇ ಸಾಲಿನ ಗೌರವ ಪ್ರಶಸ್ತಿಗೆ ‘ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿ ಸೇವೆ’ಗಾಗಿ ಸಂಪಾಜೆಯ ಕುಯಿಂತೋಡು ದಾಮೋದರ, ‘ಅರೆಭಾಷಾ ಅಧ್ಯಯನ ಮತ್ತು ಸಂಶೋಧನೆ’ಗಾಗಿ ಸುಳ್ಯದ ಸಾಹಿತಿ ಎ.ಕೆ.ಹಿಮಕರ ಮತ್ತು ‘ಅರೆಭಾಷಾ ಸಾಧನೆ ಮತ್ತು ಕಲಾ ಪೋಷಕ’ರ ನೆಲೆಯಲ್ಲಿ ಕೊಡಗಿನ ಕೂಡಕಂಡ ಕಾವೇರಮ್ಮ ಸೋಮಣ್ಣ ಅವರುಗಳು ಆಯ್ಕೆಯಾಗಿದ್ದಾರೆ” ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭ ಫೆ.28 ರಂದು ಮಡಿಕೇರಿ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದ ಯದುವೀ‌ರ್ ಕೃಷ್ಣದತ್ತ ಒಡೆಯರ್ ಅವರುಗಳು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸಂಶೋಧನಾ ಪ್ರಬಂಧಗಳ ಬಿಡುಗಡೆ: ಅರೆಭಾಷೆ ಅಕಾಡೆಮಿಯ ಫೆಲೋಶಿಪ್‌ನಡಿ ಅರೆಭಾಷೆಗೆ ಸಂಬಂಧಿಸಿದ ವಿವಿಧ ವಿಷಯಗಳಡಿ ಸಂಶೋಧನೆಗಳನ್ನು ನಡೆಸಲಾಗಿತ್ತು. ಅದರಂತೆ ಡಾ. ಪುರುಷೋತ್ತಮ ಕೆ.ವಿ., ಬೇಕಲ್ ಲೀಲಾವತಿ, ಲೋಕೇಶ್ ಪೆರ್ಲಂಪಾಡಿ, ಕೆ.ಆರ್.ತೇಜಕುಮಾರ್‌, ಡಿ.ಸಿ.ನಂಜುಂಡ ಮತ್ತು ಸೀತಾರಾಮ ಕೇವಳ ಅವರ ಸಂಶೋಧನಾ ಪುಸ್ತಕಗಳನ್ನು ಬಿಡುಗಡೆಮಾಡಲಾಗುತ್ತದೆ ಎಂದು ಮಾವಜಿ ತಿಳಿಸಿದರು.

ವಿವಿಧ ಪುಸ್ತಕಗಳ ಅನಾವರಣ: ಪುಸ್ತಕ ಪ್ರಕಟಣೆಗಾಗಿ ಅಕಾಡೆಮಿ ನೀಡಿದ್ದ ಆಹ್ವಾನದಂತೆ ವಿವಿಧ ಲೇಖಕರು ಸಲ್ಲಿಸಿರುವ ಪುಸ್ತಕಗಳಲ್ಲಿ ಆಯ್ಕೆ ಮಾಡಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯ ಇದೇ ಸಂದರ್ಭ ನಡೆಸಲು ಉದ್ದೇಶಿಸಲಾಗಿದೆ. ವಿಮಲಾ ಅರುಣ ಪಡ್ಡಂಬೈಲು ಅವರ ‘ಸೂಂತ್ರಿ’, ಕುಕ್ಕನೂರು ರೇಷ್ಮ ಅವರ ‘ಕಥಾ ಸಂಕಲನ’, ಲೀಲಾ ದಾಮೋದರ ಅವರು ರಚಿಸಿರುವ ‘ಸಾಲು ದೀಪ’ ಪುಸ್ತಕ ಬಿಡುಗಡೆಯಾಗಲಿದೆ.

ವಾದ್ಯ ಪರಿಕರಗಳ ವಿತರಣೆ: ಸಮಾರಂಭದಲ್ಲಿ ಅಕಾಡೆಮಿ
ವತಿಯಿಂದ ಅರೆಭಾಷೆ ಮಾತನಾಡುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲಾವಿದರಿಗೆ ವಾದ್ಯ ಪರಿಕರಗಳನ್ನು ವಿತರಿಸಲಾಗುವುದು ಎಂದು ಸದಾನಂದ ಮಾವಜಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಪೂಲಕಂಡ ಸಂದೀಪ್‌ ಹಾಗೂ ಪೊನ್ನಚ್ಚನ ಮೋಹನ್ ಉಪಸ್ಥಿತರಿದ್ದರು
.