ಅಧಿಕಾರಿಗಳು ಬಾರದ ಹಿನ್ನಲೆ : ನಗರ ಪಂಚಾಯತ್ ಸಾಮಾನ್ಯ ಸಭೆ ಮುಂದೂಡಿಕೆ

0

ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರುಗಳ ಒಮ್ಮತದ ನಿರ್ಧಾರ

ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆಯಬೇಕಾಗಿದ್ದ ಸಾಮಾನ್ಯ ಸಭೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಬಾರದ ಕಾರಣ ಸಭೆಯನ್ನು ಮುಂದೂಡಿದ ಘಟನೆ ನಡೆದಿದೆ.

ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕಳೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದ ರಾಷ್ಟ್ರೀಯ ಹಬ್ಬ ಸಮಿತಿಯ ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸದಸ್ಯರುಗಳಿಗೆ ನೀಡಬೇಕಿದ್ದ ಗೌರವವನ್ನು ಸಂಬಂಧಪಟ್ಟ ಅಧಿಕಾರಿಗಳು ಅಂದು ನೀಡಲಿಲ್ಲ. ಇದರ ಬಗ್ಗೆ ಡಿಸಿ ಅವರಿಗೆ ದೂರು ನೀಡುವಂತೆ ತೀರ್ಮಾನವನ್ನು ಕೈಗೊಂಡಿದ್ದು, ಆದರೆ ಅದಕ್ಕೆ ಉತ್ತರ ಬರೆದ ಪತ್ರದ ವಿವರವನ್ನು ಸದಸ್ಯ ವೆಂಕಪ್ಪ ಗೌಡರು ಮುಖ್ಯಾಧಿಕಾರಿಯ ಬಳಿ ಕೇಳಿದರು.
ಈ ವೇಳೆ ಬರೆದ ಪತ್ರದ ಕಾಪಿಯನ್ನು ಓದಿದ ವೆಂಕಪ್ಪ ಗೌಡರು ಡಿ ಸಿ ಅವರಿಗೆ ಬರೆದ ಪತ್ರದಲ್ಲಿ ಇಲ್ಲಿಯ ಅಧಿಕಾರಿಗಳು ಯಾವುದೇ ತಪ್ಪು ಮಾಡಲಿಲ್ಲ ಎಂಬ ರೀತಿಯಲ್ಲಿ ಬರೆದಿದ್ದಾರೆ. ಈ ರೀತಿಯ ಪತ್ರ ಬರೆಯಲು ನಿಮಗೆ ಯಾರು ಅಧಿಕಾರವನ್ನು ನೀಡಿದವರು? ಎಂದು ಆಕ್ರೋಶಗೊಂಡರು.
ಇದಕ್ಕೆ ಪೂರಕವಾಗಿ ಸದಸ್ಯರಾದ ವಿನಯಕುಮಾರ್ ಕಂದಡ್ಕ ರವರು ಕೂಡ ವೆಂಕಪ್ಪ ಗೌಡ ಮಾತಿಗೆ ಸಹಮತ ನೀಡಿದ್ದು , ಎಲ್ಲವೂ ನೀವು ಮಾಡಿದಂತೆ ಆಗುವುದಾದರೆ ಇಂದಿನ ಸಭೆಯನ್ನು ಏಕೆ ಮಾಡುತ್ತೀರಿ? ಅಲ್ಲದೆ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನಗರದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಾಗಿ ರಸ್ತೆಯಲ್ಲಿ ತೋಡುತ್ತಿರುವ ಗುಂಡಿಗಳು ಇಂದು ಇಡೀ ನಗರದ ಜನರನ್ನು ಸಮಸ್ಯೆಗೆ ತಳ್ಳಿದೆ. ಅಲ್ಲದೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ನಿಲ್ದಾಣದ ಒಳಭಾಗಕ್ಕೆ ಹೋಗುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು ನಗರದಲ್ಲಿ ನಾವು ಜನಪ್ರತಿನಿಧಿಗಳು ನಡೆದಾಡಿದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಕೇಳುವ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಮೂಲ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಸಭೆಗೆ ಬರದೆ ಇರುವುದು. ಇದನ್ನು ಕೇಳುವವರು ಯಾರು ಇಲ್ಲದಂತೆ ಆಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇಂದಿನ ಸಭೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ವಿನಯಕುಮಾರ್ ಕಂದಡ್ಕ ಅವರು ಸಭೆಯನ್ನು ಮುಂದೂಡುವಂತೆ ಅಧ್ಯಕ್ಷರಿಗೆ ಹೇಳಿದರು.

ಅದರಂತೆ ಅಧ್ಯಕ್ಷರು ಕೂಡ ಈ ಮಾತಿಗೆ ಸಹಮತವನ್ನು ವ್ಯಕ್ತಪಡಿಸಿ ಸಂಬಂಧ ಪಟ್ಟ ಅಧಿಕಾರಿಗಳು ಈ ಸಭೆಗೆ ಬರಲೇಬೇಕು ಮತ್ತು ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿ ಸಭೆಯನ್ನು ಮುಂದೂಡಿದರು.