ಕಂದಾಯ, ಮೆಸ್ಕಾಂ, ಅರಣ್ಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಬಾರದಿದ್ದರೆ ಗ್ರಾಮಸಭೆ ರದ್ದು- ಗ್ರಾಮಸ್ಥರ ಒತ್ತಾಯ
ಗುತ್ತಿಗಾರು ಗ್ರಾಮ ಪಂಚಾಯತ್‌ನ ದ್ವಿತೀಯ ಹಂತದ ಗ್ರಾಮ ಸಭೆಯ ಮೊದಲ ವಾರ್ಡ್ ಸಭೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲೆಮಜಲುನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತಿನ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಸಾಲ್ತಾಡಿ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಮೆಟ್ಟಿನಡ್ಕ ಹಾಗೂ ಅಭಿವೃದ್ಧಿ ಅಧಿಕಾರಿ ದನಪತಿ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಥಮವಾಗಿ ವಾರ್ಡಿನಲ್ಲಿರುವ ಬೀದಿ ದೀಪಗಳ ದುರಸ್ತಿ ಹಾಗೂ ಅಳವಡಿಕೆ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದರು.
ನಂತರ ಡಿಆರ್ ಉದಯಕುಮಾರ್‌ರವರು ಮಾತನಾಡಿ ಪಂಚಾಯಿತಿನ ಸ್ವಾಧೀನದಲ್ಲಿರುವ ನಾಲ್ಕೂರು ಪಂಚಾಯಿತಿ ಕಟ್ಟಡದ ಅಡಿ ಸ್ಥಳವನ್ನು ಸರ್ವೆ ನಡೆಸಿ ದಾಖಲೀಕರಣ ಮಾಡಿಕೊಳ್ಳಬೇಕೆಂದು ಹೇಳಿದರು. ಹಾಗೂ ವಾರ್ಡ್‌ಗಳಲ್ಲಿ ಹಾದು ಹೋಗುವ ಪಂಚಾಯತ್ ರಸ್ತೆಗಳನ್ನು ಕ್ರಮವಾಗಿ ಅಳತೆ ಮಾಡಿ ದಾಖಲಿಸಿಕೊಳ್ಳಬೇಕು. ಹಾಗೂ ಮುಂದೆ ನಡೆಯುವ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಗೆ ಅಗತ್ಯವಾಗಿ ಮಾಹಿತಿ ನೀಡುವಂತೆ ಮೆಸ್ಕಾಂ ಕಂದಾಯ ಅರಣ್ಯ ಪೊಲೀಸ್ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಅಗತ್ಯವಾಗಿ ಹಾಜರಿರುವಂತೆ ನೋಡಿಕೊಳ್ಳಬೇಕೆಂದು ದಿನೇಶ್ ಹಾಲೆಮಜಲು ಅವರು ಪಿ.ಡಿ.ಓ ಅವರಿಗೆ ಹೇಳಿದರು. ಇಲ್ಲದಿದ್ದರೆ ಗ್ರಾಮ ಸಭೆ ರದ್ದು ಮಾಡಿ ಎಂದರು. ಶಾಲಾ ಎಸ್.ಡಿ.ಎಂಸಿ. ಅಧ್ಯಕ್ಷೆ ಶ್ರೀಮತಿ ಸವಿತಾ ಹುಲಿಮನೆ ಅವರು ಮಾತನಾಡಿ, ಶಾಲೆಯ ಮೇಲ್ಚಾವಣಿ ಸೋರುತ್ತಿದ್ದು ಇದಕ್ಕೆ ಅಗತ್ಯವಾಗಿ ಸೀಟಿನ ಮಾಡು ಮಾಡಿಕೊಡಬೇಕೆಂದು ವಿನಂತಿಸಿದರು. ಅಲ್ಲದೆ ಶಾಲೆಯ ಆವರಣ ಗೋಡೆ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೂಡ ಹೇಳಿದ್ದರು. ಚಂದ್ರಶೇಖರ ಅಡ್ಕಾರು ಮಾತನಾಡಿ, ನಮ್ಮಲ್ಲಿ ರಸ್ತೆ ದುರಸ್ತಿಯಾಗಿದೆ. ಆದರೆ ಚರಂಡಿ ನಿರ್ಮಾಣವಾಗಿರುವುದಿಲ್ಲ. ಈ ಮಳೆಗಾಲಕ್ಕೆ ಮೊದಲು ಚರಂಡಿ ನಿರ್ಮಿಸಿ ಕೊಡಿ ಎಂದರು. ಹಾಲೆಮಜಲಿಂದ ಪಂಜಿಪಳ್ಳ ರಸ್ತೆಯು ಡಾಮರೆಲ್ಲ ಕಿತ್ತು ಹೋಗಿದ್ದು, ವಾಹನ ಸಂಚಾರ ಸೇರಿ ನಡೆದಾಡಲು ಕಷ್ಟಕರವಾಗಿದೆ. ಎಂಬುದಾಗಿ ದಿನೇಶ್ ಹೇಳಿದರು. ಇದಕ್ಕೆ ಪಂಚಾಯಿತಿ ಉಪಾಧ್ಯಕ್ಷ ಭಾರತೀಯರು ಉತ್ತರಿಸಿ ಈ ಬಾರಿ ಆ ರಸ್ತೆಯ ಅಭಿವೃದ್ಧಿಗೆ ಅನುದಾನವನ್ನು ಇರಿಸಲಾಗಿದೆ ಎಂದರು. ಜಲ್ ಜೀವನ್ ಮಿಷನ್ ಅಡಿ ನಡೆಯುವ ಕುಡಿಯುವ ನೀರು ಯೋಜನೆಯನ್ನು ಸಮರ್ಪಕವಾಗಿ ಇದ್ದರೆ ಮಾತ್ರ ಗ್ರಾಮ ಪಂಚಾಯತ್ ತಮ್ಮ ಸ್ವಾದಿನ ಗುತ್ತಿಗೆ ಪಡೆದುಕೊಳ್ಳಬೇಕೆಂದು ಉದಯಕುಮಾರ್ ಹೇಳಿದರು. ಪಿಡಿಓರವರು ಗ್ರಾಮಸ್ಥರ ಬೇಡಿಕೆಗಳನ್ನು ದಾಖಲಿಸಿಕೊಂಡರು.
ಅಂಗನವಾಡಿ ಕಾರ್ಯಕರ್ತೆ ತೇಜಾವತಿ ಮಾತನಾಡಿ, ಅಂಗನವಾಡಿಯ ಮೇಲ್ಚಾವಣಿಗೆ ಹೋಗಲು ಮೆಟ್ಟಿಲು ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿದರು. ಗ್ರಾಮಸ್ಥರು ಇನ್ನಿತರ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿದರು. ಪಂಚಾಯಿತಿ ಸಿಬ್ಬಂದಿ ಸೋಮಯ್ಯರವರು ಸ್ವಾಗತಿಸಿ, ವಂದಿಸಿದರು.