ಗ್ರಾಮ ಪಂಚಾಯತ್ ಸದಸ್ಯ ಪಿ ಎಲ್ ಸುರೇಶ್ ರವರ ಬಂಧನ-ಸ್ಥಳೀಯರ ವಿರೋಧಕ್ಕೆ ಮಣಿದು ಬಿಡುಗಡೆ

ಸಂಪಾಜೆ ಕೊಯಿನಾಡು ಶಾಲಾ ಹಿಂಭಾಗ ಪ್ರಕೃತಿ ವಿಕೋಪ ಹಿನ್ನಲೆ ನಿರಂತರ ಬರೆ ಜರಿತ ಉಂಟಾಗುತಿದ್ದ ಕಾರಣ ಶಾಲೆಯ ಸ್ಥಳವನ್ನು ಬದಲಾವಣೆ ಮಾಡಿ ಹೆದ್ದಾರಿಯ ಬದಿಯಲ್ಲಿ ಶಾಲೆಯ ಕಟ್ಟಡ ನಿರ್ಮಿಸುವ ಕುರಿತು ಸ್ಥಳೀಯರ ಸಭೆ ನಡೆದು ತೀರ್ಮಾನ ಕೈ ಗೊಳ್ಳಲಾಗಿತ್ತು.

ಈ ನಿಟ್ಟಿನಲ್ಲಿ ಮಾ ೩ ರಂದು ಸ್ಥಳದ ಸ್ವಚ್ಛತಾ ಕಾರ್ಯಕ್ರಮಕ್ಕೆ ಸ್ಥಳೀಯರು ಆಗಮಿಸಿದ್ದು ಈ ವೇಳೆ ಅರಣ್ಯ ಇಲಾಖೆಯವರು ಬಂದು ಈ ಸ್ಥಳ ನಮ್ಮ ಇಲಾಖೆಗೆ ಸೇರಿದ್ದು ಇಲ್ಲಿ ಯಾವುದೇ ಶಾಲೆ ಅಥವಾ ಕಟ್ಟಡ ಕಟ್ಟಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ಥಳೀಯರ ನಡುವೆ ಮಾತಿಗೆ ಮಾತು ಬೆಳೆದು ಚಕಮಕಿ ಉಂಟಾಗಿದ್ದು ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು ಗ್ರಾಮ ಪಂಚಾಯತ್ ಸದಸ್ಯ ಪಿ ಎಲ್ ಸುರೇಶ್ ರವರನ್ನು ಬಂಧಿಸಿ ಜೀಪಿನಲ್ಲಿ ಕೂರಿಸಿದರು. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಸ್ಥಳೀಯ ನಿವಾಸಿಗಳು ಈ ಘಟನೆಯನ್ನು ಖಂಡಿಸಿದಾಗ ಜನರ ಒತ್ತಡಕ್ಕೆ ಮಣಿದು ಸುರೇಶ್ ರವರನ್ನು ಬಿಡುಗಡೆ ಗೊಳಿಸಿದ್ದಾರೆ. ಬಳಿಕ ಈ ವಿಷಯದ ಕುರಿತು ೩ ದಿನಗಳಲ್ಲಿ ಜಂಟಿ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ಚರ್ಚಿಸುವ ಬಗ್ಗೆ ಮಾತು ಕತೆ ಮಾಡಿ ಸಧ್ಯಕ್ಕೆ ವಿಷಯಕ್ಕೆ ತೆರೆ ಎಳೆಯಲಾಯಿತೆಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಎಸಿಎಫ್ ಮೊಹಿನ್ ಪಾಷಾ, ಗ್ರಾ.ಪಂ.ಅಧ್ಯಕ್ಷೆ ರಮಾದೇವಿ ಕಳಗಿ,ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರು, ಎಸ್.ಪಿ.ಹನೀಫ್, ಮನು ಪೆರುಮುಂಡ, ಜಿ.ಪಂ.ಮಾಜಿ ಸದಸ್ಯೆ ಮೀನಾಕುಮಾರಿ, ಜಿ.ಪಂ..ಸದಸ್ಯರಾದ ಮೊಯಿದೀನ್ ಮೊದಲಾದವರಿದ್ದರು.



