ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ

0

ಸದಸ್ಯ ಶರೀಫ್ ಕಂಠಿಯವರ ಮೇಲಿನ ಪ್ರಕರಣ ರಾಜಕೀಯ ಪ್ರೇರಿತ

ಸಭೆಯಲ್ಲಿ ಖಂಡನಾ ನಿರ್ಣಯ ಮಾಡಲು ಎಂ. ವೆಂಕಪ್ಪ ಗೌಡ ಆಗ್ರಹ

ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನಿನ ರೀತಿಯಲ್ಲಿ ಸರಿಪಡಿಸಿಕೊಳ್ಳುವುದು ಉತ್ತಮ :ವಿನಯಕುಮಾರ್ ಕಂದಡ್ಕ

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ಮಾ. ೨೯ ರಂದು ನಗರ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿಯೇ ಸದಸ್ಯ ವೆಂಕಪ್ಪ ಗೌಡರು ಮಾತನಾಡಿ, ನಗರದ ಕಟ್ಟಡ ತೆರಿಗೆಗಳನ್ನು ಪಾವತಿಸಲು ಬಾಕಿ ಇರುವವರ ಪಟ್ಟಿಯ ಬಗ್ಗೆ ಕೇಳಿ ಈ ಸಭೆಯಲ್ಲಿ ನೀಡಿರುವ ಪಟ್ಟಿಗಳು ಯಾವುದೂ ಕೂಡ ಸರಿಇಲ್ಲ. ಪರಿಪೂರ್ಣವಾದ ಪಟ್ಟಿ ಯನ್ನು ಮೊದಲು ಸಭೆಗೆ ನೀಡಿ ಎಂದು ಹೇಳಿದರು.

ಬಳಿಕ ಸದಸ್ಯ ಶರೀಫ್ ಕಂಠಿಯವರ ಮೇಲಿನ ಈಗ ನಡೆದಿರುವ ಪ್ರಕರಣದ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿ ಸದಸ್ಯರಾದ ಶರೀಫ್ ಕಂಠಿ ರವರು ಉತ್ತಮ ಜನಪ್ರತಿನಿಧಿ ಮತ್ತು ನಮ್ಮ ಜೊತೆ ಉತ್ತಮ ಕೆಲಸ ಕಾರ್ಯವನ್ನು ಮಾಡುವ ವ್ಯಕ್ತಿಯಾಗಿದ್ದು ಅವರ ಮೇಲೆ ಆಗಿರುವ ಆರೋಪ ರಾಜಕೀಯ ಪ್ರೇರಿತವಾಗಿದೆ. ಒಂದು ವಾರ್ಡಿನ ಜನಪ್ರತಿ ನಿಧಿಯಾದಾಗ ಆ ವಾರ್ಡಿನ ಎಲ್ಲಾ ಒಳಿತು ಮತ್ತು ಕೆಡುಕಿನ ಬಗ್ಗೆ ಅವರು ನಿಗಾ ವಹಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಶರೀಫ್ ಅವರು ಅವರ ವಾರ್ಡಿನಲ್ಲಿ ಯಾರೋ ಒಬ್ಬರ ಕಾರಿನ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿ ಕಿರಿ ಕಿರಿ ಆಗುತ್ತಿದ್ದಾಗ ಅದನ್ನು ಮಾತಾಡಿ ಬಗೆ ಹರಿಸಲು ಮುಂದಾಗಿದ್ದಾರೆ. ಆದರೆ ಆ ವಿಷಯವನ್ನು ದೊಡ್ಡದು ಮಾಡಿ ಅವರ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ಸಿಕ್ಕಿಸುವ ಕೆಲಸ ಇಲ್ಲಿ ಮಾಡಿದ್ದಾರೆ.
ದೂರು ನೀಡಿರುವ ಮಹಿಳೆ ಅವರ ಯಾವುದೋ ಹಳೆಯ ದ್ವೇಷ ವನ್ನು ಇಟ್ಟು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತಿದ್ದು ದೂರು ನೀಡಿರುವ ಮಹಿಳೆಯ ಮಗಳ ಮಗುವಿಗೆ ಕೆಲವು ತಿಂಗಳ ಮೊದಲು ಆ ಮಗುವಿನ ತಾಯಿ ಯಾವುದೋ ಕಾರಣಕ್ಕೆ ಮಗುವಿಗೆ ಬೆಚ್ಚಗಿನ ಸೌಟಿನಿಂದ ಸುಟ್ಟು ಗಾಯಗೊಳಿಸಿದ್ದ ಬಗ್ಗೆ ಮತ್ತು ಆ ಮಗುವಿನ ರಕ್ಷಣೆಗಾಗಿ ಶರೀಫ್ ಕಂಠಿಯವರು ನಿಂತ ವಿಷಯದ ಕುರಿತು ಮಹಿಳೆಯ ಮೇಲೆ ಪ್ರಕರಣ ದಾಖಲಾಗಿ ಅದು ನ್ಯಾಯಾಲಯಕ್ಕೆ ಹೋಗಿತ್ತು. ನ್ಯಾಯಾಲಯದಲ್ಲಿ ಆ ವಿಷಯಕ್ಕೆ ಸಂಭಂದಿಸಿ ಸಾಕ್ಷಿ ಹೇಳಲು ಶರೀಫ್ ರವರು ಕೋರ್ಟ್ ಗೆ ಹೋಗಿದ್ದು ಈ ಸಂದರ್ಭದಲ್ಲಿ ಈ ಮಹಿಳೆಯ ಮಗಳ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಹೇಳಿದ್ದರು. ಆದರೆ ಇದಕ್ಕೆ ಯಾವುದಕ್ಕೂ ಭಯ ಪಡದೆ ಶರೀಫ್ ಅವರು ಅಂದು ಸಾಕ್ಷಿ ಹೇಳಿದ್ದು ಬಳಿಕ ಆ ಮಹಿಳೆಗೆ ಕಾನೂನಿನಲ್ಲಿ ಶಿಕ್ಷೆ ಕೂಡ ಪ್ರಕಟ ವಾಗಿತ್ತು.

ಈ ವಿಷಯದ ಕುರಿತು ಕೋಪಗೊಂಡಿರುವ ಮಹಿಳೆ ಇದೀಗ ಮಹಿಳೆ ಈ ರೀತಿಯ ಆರೋಪವನ್ನು ಶರೀಫ್ ಅವರ ಮೇಲೆ ಮಾಡಿ ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ.

ಅಲ್ಲದೆ ಅವರೊಂದಿಗೆ ಬೇರೆ ಇತರ ರಾಜಕೀಯ ಶಕ್ತಿಗಳು ಸೇರಿ ಈ ವಿಷಯವನ್ನು ದೊಡ್ಡದಾಗುವ ರೀತಿಯಲ್ಲಿ ಮಾಡಿದ್ದಾರೆ.ಆದ್ದರಿಂದ ನಾವು ಜನಪ್ರತಿನಿಧಿಗಳಾಗಿ ಮತ್ತು ನಗರ ಪಂಚಾಯತ್ ಸದಸ್ಯರುಗಳಾಗಿ ಶರೀಫ್ ಅವರ ಮೇಲೆ ಆಗಿರುವ ಸುಳ್ಳು ಪ್ರಕರಣವನ್ನು ಖಂಡಿಸ ಬೇಕಾಗುತ್ತದೆ. ಎಂದು ಆಗ್ರಹ ವ್ಯಕ್ತಪಡಿಸಿದರು.

ಇದಕ್ಕೆ ಪೂರಕವಾಗಿ ಕೆ ಎಸ್ ಉಮ್ಮರ್ ರವರು ಕೂಡ ಮಾತನಾಡಿ ಶರೀಫ್ ಅವರು ಒಬ್ಬ ಜನಪ್ರತಿನಿಧಿಯಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮತ್ತು ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ.

ಅವರ ಮೇಲೆ ಸುಳ್ಳು ಆರೋಪ ಮಾಡಿ ಈ ಒಂದು ವಿಷಯದಲ್ಲಿ ತೊಂದರೆ ನೀಡುತ್ತಿದ್ದಾರೆ.ಅದು ಸರಿಯಲ್ಲ ಅದನ್ನು ನಾವು ಖಂಡಿಸಬೇಕು ಎಂದು ಹೇಳಿದರು.

ಇದೇ ವೇಳೆ ಈ ಕುರಿತು ಮಾತನಾಡಿದ ಸದಸ್ಯ ವಿನಯಕುಮಾರ್ ಕಂದಡ್ಕ ಪ್ರಕರಣಗಳು ನನ್ನ ಮೇಲೂ ಕೂಡ ಹಲವಾರು ಆಗಿದೆ. ಜನಪ್ರತಿನಿಧಿಗಳು ಅಂದ ಮೇಲೆ ಇದು ಸಹಜವಾಗಿ ಇರುತ್ತದೆ.ಅಲ್ಲದೆ ಈ ವಿಷಯ ಇದೀಗ ಪ್ರಕರಣ ದಾಖಲಾಗಿದ್ದು ಪೊಲೀಸ್ ಇಲಾಖೆಯಿಂದ ಈ ಬಗ್ಗೆ ತನಿಖೆ ನಡೆಯುತ್ತಿದೆ.ಇದರ ಬಗ್ಗೆ ತನಿಖೆ ಹೊರ ಬರಲಿ ಮತ್ತು ಕಾನೂನಿನ ರೀತಿಯಲ್ಲಿ ಕೆಲಸ ಮುಂದುವರಿಯಲಿ ಎಂದು ಅವರು ಹೇಳಿದರು.

ಆಗ ಮತ್ತೆ ವೆಂಕಪ್ಪಗೌಡರು ಮಾತನಾಡಿ ಇದು ರಾಜಕೀಯ ದುರುದ್ದೇಶದಿಂದ ಮಾಡಿದ್ದಾರೆ ಎಂದು ಹೇಳಿದಾಗ ಅದಕ್ಕೆ ವಿನಯ್ ಕಂದಡ್ಕರವರು ಉತ್ತರ ನೀಡಿ ಆ ರೀತಿ ಹೇಳುವುದಾದರೆ ರಾಜಕೀಯ ದ್ವೇಷದ ಬಗ್ಗೆ ಹೇಳುವುದಾದರೆ ವಿಧಾನ ಸಭೆಯಲ್ಲಿಯೂ ಕೂಡ ದ್ವೇಷ ರಾಜಕೀಯ ಆಗುತ್ತಿಲ್ಲವಾ. ಅಲ್ಲಿಯೂ ಕೂಡ ಅನೇಕ ಮಂದಿ ಬಿಜೆಪಿ ಶಾಸಕರನ್ನು ಸಭಾಧ್ಯಕ್ಷರು ಅಮಾನತು ಮಾಡಿದ್ದಾರೆ ಅದು ಏನು ಎಂದು ವಿಷಯ ನಗರ ಪಂಚಾಯತಿಯಿಂದ ವಿಧಾನಸಭಾ ಕಲಾಪಕ್ಕೆ ಹೋದ ಘಟನೆಯೂ ನಡೆಯಿತು.

ಕೂಡಲೆ ಮಧ್ಯಪ್ರವೇಶಿಸಿದ ಅಧ್ಯಕ್ಷೆ ಶಶಿಕಲಾ ನೀರ ಬಿದಿರೆ ರವರು ಸುಮ್ಮನೆ ಅದೆಲ್ಲಾ ಚರ್ಚೆ ಮಾಡಿ ಸಮಯ ಮುಂದೂಡ ಬೇಡಿ ಇವತ್ತಿನ ಅಜೆಂಡಾದ ಬಗ್ಗೆ ಮಾತನಾಡುವ ಎಂದು ವಿಷಯವನ್ನು ಈ ದಿನದ ಸಭೆಗೆ ತಿರುಗಿಸಿದರು.

ಬಳಿಕ ಸಭೆಯೂ ಸಭೆಯ ಅಜೆಂಡಾ ಬಗ್ಗೆ ತಿರುಗಿ ಅದರ ಬಗ್ಗೆ ಚರ್ಚೆಗಳು ನಡೆಯಲು ಆರಂಭಿಸಿದವು. ವೇದಿಕೆಯಲ್ಲಿ ಉಪಾಧ್ಯಕ್ಷ ಬುದ್ಧ ನಾಯಕ್ ತಾಯಿ ಸಮಿತಿಯ ಅಧ್ಯಕ್ಷ ಶ್ರೀಮತಿ ಕಿಶೋರಿ ಶೇಟ್ ಉಪಸ್ಥಿತರಿದ್ದರು.

ನಗರ ಸೂಡಾ ಅಧ್ಯಕ್ಷರ ಕಚೇರಿ ಬಗ್ಗೆ ಕಾವೇರಿದ ಚರ್ಚೆ

ನಗರ ಸಭೆ ಕಚೇರಿಯಲ್ಲಿ ಸೂಡಾ ಪ್ರಾಧಿಕಾರದ ಕಚೇರಿ ಆಗುತ್ತಿದ್ದು ಈ ಬಗ್ಗೆ ನಗರ ಪಂಚಾಯತ್ ನ ಸದಸ್ಯರುಗಳಿಗೆ ಯಾವುದೇ ಮಾಹಿತಿ ಇಲ್ಲ.ನಾವೇನು ನಗರ ಪಂಚಾಯತ್ ಸಭೆಗೆ ಬರೇ ಟೀ ಕುಡಿಯಲು ಮತ್ತು ಬಿಸ್ಕೆಟ್ ತಿನ್ನಲು ಬರುವುದಾ ಎಂದು ಸದಸ್ಯೆ ಶಿಲ್ಪಾ ಸುದೇವ್ ಅವರು ಅಧ್ಯಕ್ಷರ ಬಳಿ ಕೇಳಿದರು.ಈ ವೇಳೆ ಇದಕ್ಕೆ ಪೂರಕವಾಗಿ ಸದಸ್ಯ ವಿನಯಕುಮಾರ್ ಕಂದಡ್ಕ ಅವರು ಕೂಡ ಮಾತನಾಡಿ ಇದು ಗಂಭೀರ ವಿಷಯವಾಗಿದ್ದು ಕಚೇರಿ ನಿರ್ಮಾಣ ಮಾಡುವುದರಲ್ಲಿ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ ಸ್ಥಳೀಯ ನಗರ ಪಂಚಾಯತ್ನ ಸದಸ್ಯರುಗಳ ಗಮನಕ್ಕೆ ತಾರದೆ ಮತ್ತು ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗುವುದರ ಮೊದಲೇ ಕಾಮಗಾರಿ ಆರಂಭ ಮಾಡಿರುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಅಧ್ಯಕ್ಷರೂ ಕೂಡ ನನಗೂ ಕೂಡ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದಾಗ ಮುಖ್ಯ ಅಧಿಕಾರಿಯವರು ಮಾತನಾಡಿ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ಬಂದಿರಬಹುದು ಎಂದು ನಾನು ಕೂಡ ತಿಳಿದಿದ್ದೆ. ಆದರೆ ಇದು ಯಾರಿಗೂ ತಿಳಿದಿಲ್ಲವಾ ಎಂಬುದು ಇದೀಗ ನನಗೆ ಗೊತ್ತಾಗಿದ್ದು ಎಂದು ಹೇಳಿದರು.ಇದಕ್ಕೆ ಎಲ್ಲಾ ಸದಸ್ಯರುಗಳು ಒಟ್ಟಾಗಿ ಆಕ್ಷೇಪ ವ್ಯಕ್ತ ಪಡಿಸಿದಾಗ ಈ ಬಗ್ಗೆ ಕೆಲವು ಸಮಯ ಚರ್ಚೆಗಳು ನಡೆಯಿತು. ಸದಸ್ಯರು ಎಲ್ಲರೂ ಮಾತನಾಡಿ ಕಚೇರಿ ನಿರ್ಮಾಣದ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ನಮ್ಮ ಗಮನಕ್ಕೆ ತರ ಬೇಕಾಗಿತ್ತು ಎಂದು ಸಲಹೆ ನೀಡಿದರು.
ಬಳಿಕ ನಿರ್ಮಾಣ ಆಗುತ್ತಿರುವ ಕಚೇರಿಯ ಬಗ್ಗೆ ನೀಲಿ ನಕ್ಷೆಯನ್ನು ಕೇಳಿ ಕೊಳ್ಳುವುದು ಮತ್ತು ಕಚೇರಿ ನಿರ್ಮಾಣಕ್ಕೆ ಅನುಮತಿಯನ್ನು ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.