ನಾಳೆ (ಮಾ.31): ಕದಿಕಡ್ಕ ಸ.ಹಿ.ಪ್ರಾ. ಶಾಲೆಯ ಶಿಕ್ಷಕಿ ಶ್ರೀಮತಿ ದೇವಕಿ ಎಂ. ಸೇವಾ ನಿವೃತ್ತಿ

0

ಜಾಲ್ಸುರು ಗ್ರಾಮದ ಕದಿಕಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ದೇವಕಿ ಎಂ ಇವರು ಮಾ. 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

1994 ಸೆಪ್ಟೆಂಬರ್ ನಲ್ಲಿ ಪುತ್ತೂರು ತಾಲೂಕಿನ ಕೊಣಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ಸೇವೆಗೆ ಸೇರಿದ ಇವರು 1999ರಲ್ಲಿ ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ಲಂಪಾಡಿ ಇಲ್ಲಿಗೆ ವರ್ಗಾವಣೆಗೊಂಡು ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ 2009ರಲ್ಲಿ ಪುತ್ತೂರು ತಾಲೂಕಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಂಬ್ರ ಇಲ್ಲಿಗೆ ವರ್ಗಾವಣೆಯಾಗಿದ್ದರು. ಅಲ್ಲಿ ಐದು ವರ್ಷಗಳ ಸೇವೆಯ ನಂತರ 2014ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕದಿಕಡ್ಕ ಇಲ್ಲಿಗೆ ವರ್ಗಾವಣೆಗೊಂಡು ಸುಮಾರು 10 ವರ್ಷ 8 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಲಿದ್ದಾರೆ.

ಇವರು ಮಂಡೆಕೋಲು ಗ್ರಾಮದ ಪೇರಾಲು ಮೂಲೆಮನೆ ಕುಶಾಲಪ್ಪ ಗೌಡ ಮತ್ತು ಶ್ರೀಮತಿ ನೀಲಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿ ಪಡೆದು ಬಳಿಕ ಪ್ರೌಢ ಶಿಕ್ಷಣವನ್ನು ವಿರಾಜಪೇಟೆಯ ಬಾಲಿಕೆಯರ ಪ್ರೌಢಶಾಲೆಯಲ್ಲಿ ಪೂರ್ತಿಗೊಳಿಸಿ ಸರ್ವೋದಯ ಶಿಕ್ಷಣ ಸಂಸ್ಥೆ ವಿರಾಜಪೇಟೆ ಇಲ್ಲಿ ಶಿಕ್ಷಣ ತರಬೇತಿ ಪಡೆದಿದ್ದರು. ತರಬೇತಿಯ ಬಳಿಕ ಎರಡು ವರ್ಷಗಳ ಕಾಲ ಗೌರವ ಶಿಕ್ಷಕಿಯಾಗಿಯೂ ದುಡಿದಿದ್ದರು.

ಇವರ ಪತಿ ಶಿವರಾಮ ಗೌಡರು ಬೆಳ್ಲಿಪ್ಪಾಡಿ ಮನೆತನದವರಾಗಿದ್ದು ಸ್ವ ಉದ್ಯೋಗ ನಡೆಸುತ್ತಿದ್ದಾರೆ. ಪುತ್ರ ಪ್ರಸನ್ನ ಬಿ.ಎಸ್ ಎಂ.ಕಾಂ. ಪದವೀಧರರಾಗಿದ್ದು ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ರಿ ಶ್ರೀಮತಿ ಹರ್ಷಿಣಿ ರಂಜಿತ್ ಎಂ.ಎಸ್ಸಿ ಪದವೀಧರೆಯಾಗಿದ್ದು ಪತಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರಂಜಿತ್ ಹಾಗೂ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಶ್ರೀಮತಿ ದೇವಕಿಯವರು ಸುಮಾರು 30 ವರ್ಷ 6 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದು ಉತ್ತಮ ಶಿಕ್ಷಕಿಯಾಗಿ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಲಾ ನಿಯಮ, ಸರಕಾರದ ನಿಯಮಗಳನ್ನು ಪಾಲಿಸುತ್ತಾ ಪ್ರಾಮಾಣಿಕತೆಯಿಂದ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.