ನೆಟ್ಟಣದಲ್ಲಿ ಕೆಎನ್ಎಸ್ಎಸ್ ಸಭಾ ಭವನದ ಉದ್ಘಾಟನೆ

0

ಡಾ.ಆರ್.ಕೆ.ನಾಯರ್, ಪ್ರಸಾದ್ ನೆಟ್ಟಣ ಅವರಿಗೆ ಅಭಿನಂದನೆ

ಅವಿಭಕ್ತ ಕುಟುಂಬಗಳು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ನೆಟ್ಟಣದಂತಹ ಗ್ರಾಮೀಣ ಪ್ರದೇಶದಲ್ಲಿ ಕೇವಲ 19 ಮನೆಗಳನ್ನು ಹೊಂದಿರುವ ನಾಯರ್ ಸಮಾಜವು ಸಂಘಟಿತವಾಗಿ ನಡೆಸಿರುವ ಕಾರ್ಯ ಶ್ಲಾಘನೀಯವಾದುದು. ಯಾವುದೇ ಕೆಲಸಕ್ಕೆ ಒಗ್ಗಟ್ಟು ಮತ್ತು ಒಮ್ಮನಸ್ಸಿನಿಂದ ದುಡಿದಾಗ ಯಶಸ್ಸು ನಿಶ್ಚಿತ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ|ಆರ್.ಕೆ.ನಾಯರ್ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ನೆಲ್ಯಾಡಿ ಕರಯೋಗಂ ನ ಘಟಕವಾದ ನೆಟ್ಟಣ ಘಟಕವು ನಿರ್ಮಿಸಿದ ನೂತನ ಸಭಾಭವನದ ಉದ್ಘಾಟನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಯರ್ ಸಮುದಾಯವು ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳ ಜೊತೆಗೆ ಕೃಷಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ವಿಶಿಷ್ಟವಾದ ಪರಂಪರೆಯನ್ನು ಹೊಂದಿದೆ. ದೂರದ ಕೇರಳದಿಂದ ಬಹಳ ಹಿಂದೆ ತುಳುನಾಡಿಗೆ ವಲಸೆ ಬಂದ ಈ ಸಮುದಾಯದ ಹಿರಿಯರು ಸ್ಥಳೀಯ ಜನರೊಂದಿಗೆ ಆತ್ಮೀಯವಾಗಿ ಬೆರೆತುಕೊಂಡು ಇಲ್ಲಿನವರೇ ಆಗಿಹೋಗಿದ್ದರೂ ತಮ್ಮ ಮೂಲ ಸಂಸ್ಕೃತಿಯನ್ನು ಚಾಚೂ ತಪ್ಪದೆ ಇಂದಿಗೂ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರಕೃತಿಯನ್ನು ಉಳಿಸಿಕೊಂಡರೆ ಮಾತ್ರ ಮನುಷ್ಯ ಸಂಕುಲ ಈ ಭೂಮಿಯಲ್ಲಿ ಬದುಕಲು ಸಾಧ್ಯ. ಆದುದರಿಂದ ಪ್ರಕೃತಿ ಮತ್ತು ಪ್ರಕೃತಿಯಲ್ಲಿನ ಜೀವಜಾಲವನ್ನು ಪ್ರೀತಿಸಿ ಸಂರಕ್ಷಣೆ ಮಾಡುವುದು ನಮ್ಮೆಲ್ಲ ಕರ್ತವ್ಯ ಎಂದು ಆರ್.ಕೆ.ನಾಯರ್ ಹೇಳಿದರು.

ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಮನೋಹರ ಕುರುಪ್ ಅವರು ಸಮುದಾಯದ ಬೆಳವಣಿಗೆಯಲ್ಲಿ ನಮ್ಮ ಹಿರಿಯರ ಶ್ರಮ ಮತ್ತು ತ್ಯಾಗ ಅಪಾರವಾದುದು. ನೆಟ್ಟಣದಲ್ಲಿ ಈ ಸುಂದರ ಸಭಾಭವನ ನಿರ್ಮಾಣವಾಗಲು ಜಮೀನನ್ನು ದಾನವಾಗಿ ನೀಡಿದ ದಿವಂಗತ ರಾಘವನ್ ಪಿಳ್ಳೆ ಅವರ ಕಾರ್ಯ ನಮಗೆಲ್ಲಾ ಪ್ರೇರಣೆಯಾಗಬೇಕು ಎಂದರು.

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಬೆಂಗಳೂರು ಇದರ ಮಾಜಿ ಉಪಾಧ್ಯಕ್ಷ, ನ್ಯಾಯವಾದಿ ವಿಜಯಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು.

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ನೆಟ್ಟಣ ಘಟಕದ ಅಧ್ಯಕ್ಷ ಸುರೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಟಿ.ವಿ.ನಾರಾಯಣ , ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ನೆಲ್ಯಾಡಿ ಕರಯೋಗಂನ ಅಧ್ಯಕ್ಷ ಶಿವದಾಸನ್ ಪಿಳ್ಳೆ, ಬೆಂಗಳೂರಿನ ಎಂಎಂಇಸಿಟಿ ಕಾರ್ಯದರ್ಶಿ ಮುರಳೀಧರನ್ ನಾಯರ್, ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಮಾಜಿ ಉಪಾಧ್ಯಕ್ಷ ಪಿ.ಕೆ.ಎಸ್.ಪಿಳ್ಳೆ ಅತಿಥಿಗಳಾಗಿ ಉಪಸ್ಥಿತರಿದ್ದರು.

ಪರಿಸರ ಕ್ಷೇತ್ರದ ಸಾಧನೆಗಾಗಿ ಡಾ|ಆರ್.ಕೆ.ನಾಯರ್ ಹಾಗೂ ಸಭಾಭವನದ ನಿರ್ಮಾಣದಲ್ಲಿ ವಿಶೇಷ ಶ್ರಮ ವಹಿಸಿದ ಪ್ರಸಾದ್ ಕೆ.ಜಿ. ನೆಟ್ಟಣ ಅವರನ್ನು ಸಮ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಮೆರವಣಿಗೆ ನಡೆಯಿತು. ನೆಟ್ಟಣ ನಾಯರ್ ಸಮುದಾಯದ ಕಾರ್ಯಚಟುವಟಿಕೆಗಳ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಬೋರ್ಡ್ ಮೆಂಬರ್ ರಘುನಾಥನ್ ನಾಯರ್ ನೆಟ್ಟಣ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಳ್ಯ ಕರಯೋಗಂ ಉಪಾಧ್ಯಕ್ಷ ದುರ್ಗಾಕುಮಾರ್ ನಾಯರ್‌ಕೆರೆ ಅವರು ಆಶಯ ಮಾತುಗಳನ್ನಾಡಿದರು. ಉದಯಕುಮಾರ್ ಪಿ.ಆರ್. ನಿರೂಪಿಸಿ, ಪ್ರಕಾಶ್ ಕೆ.ಜಿ. ನೆಟ್ಟಣ ವಂದಿಸಿದರು.