33 ಕೆ.ವಿ ಲೈನ್ ಹೋದಲ್ಲೇ 110 ಕೆ.ವಿ. ಲೈನ್ ಕಾಮಗಾರಿ ನಡೆಸಲು ಒತ್ತಾಯ

0

ವಿದ್ಯುತ್ ಬೇಕು : ಕೃಷಿಕರಿಗೆ ತೊಂದರೆಯಾಗಬಾರದು

ಜಾಲ್ಸೂರು ‌ಗ್ರಾಮ ಸಭೆಯಲ್ಲಿ ಕೃಷಿಕರ ಅಹವಾಲು

ಸುಳ್ಯದಲ್ಲಿ ‌ನಿರ್ಮಾಣವಾಗಲಿರುವ 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ಗೆ ವಿದ್ಯುತ್ ಲೈನ್ ನ್ನು 33 ಕೆ.ವಿ. ಲೈನ್ ಹಾದು‌ ಬಂದ ಜಾಗದಲ್ಲೇ ಎಳೆಯಬೇಕು. ಈ ಕುರಿತು ಸಂಬಂಧಿಸಿದವರಿಗೆ ಮನವಿ ಮಾಡಿಕೊಳ್ಳಲು ಜಾಲ್ಸೂರು ಗ್ರಾಮ‌ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇಂದು ನಡೆದ ಜಾಲ್ಸೂರು ಗ್ರಾಮ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಭೋಜಪ್ಪ ನಾಯ್ಕ್, ನ್ಯಾಯವಾದಿ ಜಯಪ್ರಕಾಶ್ ‌ಬೈತಡ್ಕ, ಶರತ್ ಅಡ್ಕಾರ್ ‌ಮೊದಲಾದವರು‌ ಜಾಲ್ಸೂರು ಗ್ರಾಮ‌ ವ್ಯಾಪ್ತಿಯಲ್ಲಿ 110 ಕೆ.ವಿ. ಹಾದು ಹೋಗುವ ದಾರಿ ಯಾವುದು ಎಂದು ‌ಪ್ರಶ್ನಿಸಿದರು. ಈ ವೇಳೆ ಪಿಡಿಒರವರು 110 ಕೆ.ವಿ. ಹಾದು ಬರುವ ಸರ್ವೆ ನಂಬರ್ ಓದಿ ಹೇಳಿದರು.‌ ಅದು ಎಲ್ಲಿ ಬರುತ್ತದೆ ಎಂದು ಮತ್ತೆ ಗ್ರಾಮಸ್ಥರು ಪ್ರಶ್ನಿಸುದಾಗ, ಗ್ರಾಮ ಸಹಾಯಕರು ನಂಗಾರು,‌ ಪಿಲಿಕೋಡಿ, ಅಡ್ಕಾರು ಕಾಲನಿ, ಬೈತಡ್ಕ, ಕೋನಡ್ಕ ಪದವು ಆಗಿ‌ ಪಯಸ್ವಿನಿ ನದಿ ಯಾಗಿ ಸುಳ್ಯ ಪ್ರವೇಶ ಆಗುತ್ತದೆ ಎಂದು‌ ಹೇಳಿದರು.
ಹಿಂದೊಮ್ಮೆ 110 ಕೆ.ವಿ.‌ ವಿಚಾರವಾಗಿ ಗ್ರಾಮ ಸಭೆ ನಡೆದು ಕೃಷಿಕರಿಗೆ ತೊಂದರೆಯಾಗದಂತೆ ಲೈನ್ ಹಾದು ಹೋಗುವಂತೆ ಮಾಡುವುದು ಎಂದು ನಿರ್ಣಯ ಆಗಿತ್ತು.‌ ಶಾಸಕರು ಕೂಡಾ ಕೃಷಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದರು ಎಂದು ಜಯಪ್ರಕಾಶ್ ಬೈತಡ್ಕ ಹೇಳಿದರು. ನಮಗೆ‌ ವಿದ್ಯುತ್ ಬೇಕಲ್ಲವೇ ಎಂದು ಪಿಡಿಒ‌ ಹೇಳಿದಾಗ, ವಿದ್ಯುತ್ ಬೇಕು ಹಾಗಂದ ಮಾತ್ರಕ್ಕೆ ಕೃಷಿಕರಿಗೂ ತೊಂದರೆಯಾಗಬಾರದು ಎಂದು ಗ್ರಾಮಸ್ಥರು ಹೇಳಿದರು. ಗ್ರಾ.ಪಂ.‌ಅಧ್ಯಕ್ಷ ಬಾಬು ಕೆ.ಎಂ. ರವರು ಕೃಷಿಕರಿಗೆ ತೊಂದರೆಯಾಗಬಾರದು ನಿಜ. ಹಾಗಾದರೆ ಏನೆಂದು ನಿರ್ಣಯ ಬರೆಯೋಣ ಎಂದು ಗ್ರಾಮಸ್ಥರಿಂದ ಸಲಹೆ ಕೇಳಿದರು.

ನಾಳೆ 110 ಕಾಮಗಾರಿಗೆ ಶಿಲಾನ್ಯಾಸ ಆಗುತ್ತದೆ. ಶಿಲಾನ್ಯಾಸ ಮಾಡಿ ಅವರೆಲ್ಲರೂ ಹೋಗುತ್ತಾರೆ. ಇಲ್ಲಿ ಸಮಸ್ಯೆ ಆಗುವುದು ಕೃಷಿಕರಿಗೆ. ಆದ್ದರಿಂದ ಕೃಷಿಕರಿಗೆ ತೊಂದರೆಯಾಗದ ನಿರ್ಣಯ ಮಾಡೋಣ ಎಂದು ಜಯಪ್ರಕಾಶ್ ಬೈತಡ್ಕ ಹೇಳಿದರು.

ಈಗ 33 ಕೆ.ವಿ. ಲೈನ್ ಹಾದು ಹೋದಲ್ಲೇ ಹೋಗಲಿ. ಅಲ್ಲೇ 110 ಲೈನ್ ಹೋದರೆ ಏನೂ‌ ಸಮಸ್ಯೆ ಇಲ್ಲ ಎಂದು ಶರತ್ ಅಡ್ಕಾರ್ ಸಲಹೆ ನೀಡಿದರು.‌ ಇದನ್ನು ಗ್ರಾಮಸ್ಥರು ಒಪ್ಪಿದರು.‌ಅದರಂತೆ ನಿರ್ಣಯ ಕೈಗೊಳ್ಳಲಾಗುವುದೆಂದು ಅಧ್ಯಕ್ಷರು ಹೇಳಿದ ಮೇರೆಗೆ ಚರ್ಚೆಗೆ ತೆರೆ ಬಿತ್ತು.