ತಾಲೂಕು ಪಂಚಾಯತ್ ವಠಾರದಲ್ಲಿರುವ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳ ಸ್ಥಳಾಂತರಕ್ಕೆ ಸಿದ್ಧತೆ?
ಪ್ರಧಾನಿ ಮೋದಿ,ಬೊಮ್ಮಾಯಿ ಹಾಗೂ ಬಿಜೆಪಿ ನೇತಾರರ ಫೋಟೋಗಳಿದ್ದ ಸ್ಟಿಕ್ಕರ್ ವಾಹನದಿಂದ ತೆರವು ಕಾರ್ಯ
ಸುಳ್ಯ ತಾಲೂಕು ಪಂಚಾಯತ್ ಕಟ್ಟಡದ ಹೊರ ಭಾಗದಲ್ಲಿ ಕಳೆದ ಮೂರು ತಿಂಗಳ ಹಿಂದಿನಿಂದ ನಿಂತಿದ್ದ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳನ್ನು ಮಂಗಳೂರಿಗೆ ಕೊಂಡೊಯ್ಯುವ ಪ್ರಕ್ರಿಯೆ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದಕ್ಕೆ ತಯಾರಿಯಾಗಿ ಕಳೆದ ಎರಡು ದಿನಗಳಿಂದ ವಾಹನದ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ತರುವ ಸಂದರ್ಭದಲ್ಲಿ ಕಂಟೇನರ್ ಮೂಲಕ ತಂದಿದ್ದು ಇದೀಗ ಇದನ್ನು ಮಂಗಳೂರಿಗೆ ಕೊಂಡೊಯ್ಯಲು ಚಾಲಕರನ್ನು ತರಿಸಲಾಗುತ್ತದೆ ಎಂದು ಕೂಡ ತಿಳಿದುಬಂದಿದೆ.
ಅದರೊಂದಿಗೆ ಇದಕ್ಕೆ ಸಂಬಂಧಪಟ್ಟ ಕಂಪನಿಯವರು ಬಂದು ವಾಹನದಲ್ಲಿದ್ದ ಪ್ರಧಾನ ಮಂತ್ರಿ ಮೋದಿಯವರ,ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಬಂದರು ಮತ್ತು ಮೀನುಗಾರಿಕಾ ಸಚಿವ ಅಂಗಾರ,ಉಳಿದ ಬಿಜೆಪಿ ನಾಯಕರುಗಳಿದ್ದ ಸ್ಟಿಕ್ಕರನ್ನು ತೆರೆವುಗೊಳಿಸಿ ಕೇವಲ ಕೇಂದ್ರ ಸರ್ಕಾರದ ಮೀನುಗಾರಿಕಾ ಇಲಾಖೆಯ ನೂತನ ಪೋಸ್ಟರ್ ಅನ್ನು ಗಾಡಿಗೆ ಅಂಟಿಸುವ ಕೆಲಸವೂ ಕೂಡ ನಡೆಯುತ್ತಿದೆ. ಇದರ ಉದ್ದೇಶ ಏನೆಂಬುರ ಬಗ್ಗೆ ಮಾಹಿತಿ ಇನ್ನು ತಿಳಿಯಬೇಕಾಗಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಈ ಯೋಜನೆಯು ಕೆಲವು ತಾಂತ್ರಿಕ ಸಮಸ್ಯೆಗಳಿಂದ ಫಲಾನುಭವಿಗಳ ಕೈ ಸೇರದೆ ಬಾಕಿಯಾಗಿತ್ತು.
ಈ ವರದಿಯನ್ನು ಸುದ್ದಿ ಪತ್ರಿಕೆ ಮತ್ತು ಸುದ್ದಿ ಯುಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಲಾಗಿತ್ತು. ಫಲ ಎಂಬಂತೆ ಇದೀಗ ವಾಹನಗಳ ತೆರವು ಕಾರ್ಯ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.