ಬೆಳ್ಳಾರೆಯಲ್ಲಿ ಜ್ಞಾನದೀಪ ಸಂಸ್ಥೆಯ 16ನೇ ವರ್ಷದ ಜ್ಞಾನ ಸಂಭ್ರಮ

0

ಶೈಕ್ಷಣಿಕ ಜೀವನದಲ್ಲಿ ಎಡವಿದವರಿಗೆ ಭವಿಷ್ಯದ ದಾರಿ ತೋರಿಸುವುದು ಶ್ರೇಷ್ಠ ಕಾರ್ಯ : ಬಿ. ವಿ. ಸೂರ್ಯನಾರಾಯಣ

ಶೈಕ್ಷಣಿಕ ಜೀವನದಲ್ಲಿ ಯಾವುದೋ ಕಾರಣಕ್ಕೆ ಎಡವಿದವರಿಗೆ ಮತ್ತೆ ಭವಿಷ್ಯದ ದಾರಿಯನ್ನು ತೋರಿಸಿಕೊಡುವುದು ಶ್ರೇಷ್ಠ ಕಾರ್ಯವಾಗಿದೆ. ವಿಭಿನ್ನ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ತರಗತಿಗಳನ್ನು ನಡೆಸುವ ಮೂಲಕ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದು ನಿವೃತ್ತ ಪ್ರಾoಶುಪಾಲ ಬಿ. ವಿ ಸೂರ್ಯನಾರಾಯಣ ಹೇಳಿದರು. ಅವರು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಜ್ಞಾನದೀಪ ಸಂಸ್ಥೆಯ 16ನೇ ವರ್ಷದ ಜ್ಞಾನ ಸಂಭ್ರಮ, ಪ್ರತಿಭಾ ಪುರಸ್ಕಾರ ಮತ್ತು ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾದ ಗಣೇಶ್ ನಾಯಕ್ ಪುತ್ತೂರು ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದರು. 2022-23ನೇ ಸಾಲಿನಲ್ಲಿ ಶೇ.80 ಕ್ಕೂ ಅಧಿಕ ಅಂಕಗಳೊಂದಿಗೆ ಉತ್ತೀರ್ಣರಾದ ಸಂಸ್ಥೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಥೆಯಲ್ಲಿ ತರಬೇತಿ ಪಡೆದು ವಿದೇಶದಲ್ಲಿ ಉದ್ಯೋಗಕ್ಕೆ ಆಯ್ಕೆಯಾದ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿ ಸಲ್ಮಾ ಸಿ. ಹೆಚ್ ಅವರಿಗೆ ಎಜ್ಯುಕೇಶನ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಯಿತು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು.

ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಶಶಿಧರ್, ಬೆಳ್ಳಾರೆ ಸ್ನೇಹಿತರ ಕಲಾಸಂಘದ ಅಧ್ಯಕ್ಷ ಪದ್ಮನಾಭ ಬೀಡು, ಬೆಳ್ಳಾರೆ ಜೆ.ಸಿ.ಐ.ನ ನಿಯೋಜಿತ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್. ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ನಿರ್ದೇಶಕ ಉಮೇಶ್ ಮಣಿಕ್ಕಾರ ಸ್ವಾಗತಿಸಿದರು. ಉಪನ್ಯಾಸಕ ಚಂದ್ರಶೇಖರ ಅಲೆಟ್ಟಿ ವಂದಿಸಿದರು. ಉಪನ್ಯಾಸಕ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸದಾನಂದ ಕಣ್ವರ್ಷಿ ನಿರ್ದೇಶನದಲ್ಲಿ ಸುಳ್ಯದ ಶ್ರುತಿ ಗಾಯನ ಮೆಲೋಡಿಸ್ ನ ಹರ್ಷಿತ್ ಮರ್ಕಂಜ ನಿರೂಪಣೆಯಲ್ಲಿ ಸಂಸ್ಥೆಯ ಪ್ರಥಿತ ಪ್ರತಿಭಾ ವೇದಿಕೆಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.