ಪಂಜ : ವೆಂಕಪ್ಪರ ಮೊಬೈಲ್ ಸ್ಟೇಟಸ್ ಹಾಗೂ ಅಂಗಡಿ ಮುಚ್ಚಿದ ಪ್ರಕರಣ

0

ಬಿಜೆಪಿ ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ಸತ್ಯ ದರ್ಶನ ಸಭೆ: ಕಾಂಗ್ರೆಸ್ ನಾಯಕರು ಭಾಗಿ

ದ್ವೇಷ ಬಿತ್ತುವ ಸಮಾಜಕ್ಕೆ ಪ್ರೀತಿ ನೀಡುವವರೇ ಕಾಂಗ್ರೆಸಿಗರು – ರಮಾನಾಥ ರೈ

ಕಾಂಗ್ರೆಸ್ ಕಾರ್ಯಕರ್ತರನ್ನು ಕೆಣಕಿದರೆ ಹುಷಾರ್: ಎಂ. ವೆಂಕಪ್ಪ ಗೌಡ

ಪಂಜದಲ್ಲಿ ಅಂಗಡಿ ಮಾಲಕ ವೆಂಕಪ್ಪರು ಮೊಬೈಲ್ ಸ್ಟೇಟಸ್ ನಲ್ಲಿ ಕಾಂಗ್ರೆಸಿಗರನ್ನು ನಿಂದಿಸಿದ ವಿಚಾರ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿ ಅಲ್ಲಿ ಮಾತುಕತೆಯ ಮೂಲಕ ಇತ್ಯರ್ಥಗೊಂಡು ಬಳಿಕ ಅವರ ಅಂಗಡಿ ಮುಚ್ಚಿದ ಘಟನೆ ಕಾಂಗ್ರೆಸ್ ದಬ್ಬಾಳಿಕೆಯೆಂದು ಆರೋಪಿಸಿ ಬಿಜೆಪಿ ಮತ್ತು ಸಂಘ ಪರಿವಾರದವರು ಜು. 8ರಂದು ಪಂಜದಲ್ಲಿ ನಡೆಸಿದ ಪ್ರತಿಭಟನೆಗೆ ವಿರುದ್ಧವಾಗಿ ” ಬಿಜೆಪಿ ಸುಳ್ಳಿನ ವಿರುದ್ಧ ಕಾಂಗ್ರೆಸ್ ಸತ್ಯ ದರ್ಶನ ” ಎಂಬ ಸಭೆಯನ್ನು ಇಂದು ಪಂಜದಲ್ಲಿ ಆಯೋಜಿಸಿತು.

ಕಾರ್ಯಕ್ರಮಕ್ಕೆ ಮಾಜಿ ಸಚಿವ , ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಆಗಮಿಸಿ ಮಾತನಾಡಿ ಊರಿನಲ್ಲಿ ಬಿಜೆಪಿ ಹಚ್ಚಿದ ದ್ವೇಷವನ್ನು ಶಮನ ಮಾಡಲು ನಾವು ಬಂದಿದ್ದೇವೆ. ತಪ್ಪು ಮಾಡಿದ ವೆಂಕಪ್ಪರನ್ನು ಸಮರ್ಥಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಖಂಡನೀಯ. ಬಿಜೆಪಿಯವರು ಧರ್ಮ ದ್ವೇಷದ ಅಮಲಿನಲ್ಲಿ ಏನು ಮಾಡುತ್ತಾರೆಂದು ಅವರಿಗೇ ಗೊತ್ತಿಲ್ಲ. ಆದರೆ ನಮ್ಮ ಉದ್ದೇಶ ಸಾಮರಸ್ಯ ಬೆಳೆಸುವುದು. ಹಿಂದಿನಿಂದ ಬ್ಯಾರಿಗೆ ಹುಟ್ಟಿದವರೆಂದು ಹೇಳುವುದನ್ನು ನಾವು ಕೇಳಿ ಸುಮ್ಮನಾಗುತ್ತೇವೆ. ಆದರೆ ಇದು ಅಧಿಕೃತವಾಗಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ ಎಂದರೆ ಇದು ಘನಘೋರ ಅಪರಾಧ. ಇಂಥ ಸ್ಟೇಟಸ್ ಇಡೀ ಮಹಿಳಾ ಕುಲಕ್ಕೆ, ಹಿಂದೂ ಸಮಾಜಕ್ಕೆ ಮಾಡಿದ ಅವಹೇಳನ. ಇದನ್ನು ತಪ್ಪು ಎಂದು ತಿದ್ದಬೇಕಾದವರೇ ಅವರನ್ನು ಬೆಂಬಲಿಸಿ ಪ್ರತಿಭಟನೆ ಮಾಡಿ ನಮ್ಮವರಿಗೆ ಧಿಕ್ಕಾರ ಹಾಕ್ತಾರೆ ಎಂದಾದರೆ ನಾವು ಇದನ್ನು ಖಂಡಿಸಲೇಬೇಕು. ಅವರು ದ್ವೇಷ ಬಿತ್ತುವ ಕೆಲಸ ಮಾಡಿದರೆ ಸಮಾಜಕ್ಕೆ ಪ್ರೀತಿ ಬಿತ್ತುವ ಕೆಲಸ ಮಾಡೋಣ ಎಂದರು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ‌. ಜಯರಾಮ್ ಮಾತನಾಡಿ, ವೆಂಕಪ್ಪರೇ ತಾನು ಸ್ಟೇಟಸ್ ಹಾಕಿದ್ದು ತಪ್ಪು ಎಂದು ಮಹೇಶ್ ಕುಮಾರ್ ರಲ್ಲಿ ಕೇಳಿಕೊಂಡಿದ್ದಾರೆ. ಅವರಿಗೆ ತಪ್ಪಿನ ಅರಿವಾಗಿದೆ. ಆದರೆ ಸುಳ್ಯದ ಶಾಸಕಿ ಭಾಗೀರಥಿಯವರು ಅವರಿಗೆ ಬುದ್ದಿ ಹೇಳುವ ಬದಲಾಗಿ ಅವರ ತಪ್ಪನ್ನು ಸಮರ್ಥಿಸಿಕೊಂಡು ಇಡೀ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ, ಬಿಜೆಪಿ ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬೆಳ್ತಂಗಡಿಯಲ್ಲಿ ಅಕ್ರಮ ಗಣಿಗಾರಿಕೆಯ ವಿಷಯದಲ್ಲಿ ಪೊಲೀಸರು‌ ಕಾನೂನು ಕ್ರಮ ಕೈಗೊಂಡರೆ ಅದನ್ನು ಹರೀಶ್ ವಿರೋಧಿಸುತ್ತಾರೆ. ಪೂಂಜರಿಗೆ ಬೆಂಬಲವಾಗಿ ಭಾಗೀರಥಿ ಮುರುಳ್ಯ ಹೋಗುತ್ತಾರೆ. ಅವರ ಕ್ಷೇತ್ರದಲ್ಲಿ ಎಷ್ಟೋ ದಲಿತರು‌ ಕಷ್ಟದಲ್ಲಿದ್ದಾರೆ. ಇವರು ಒಮ್ಮೆಯಾದರೂ ಅವರನ್ನು ಭೇಟಿ ಮಾಡಿ ಅವರ ನೋವಿಗೆ ಸ್ಪಂದಿಸಿದ್ದಾರಾ ? ಬಿಜೆಪಿಯಲ್ಲಿ ಅರ್ಹರಿಗೆ ಟಿಕೇಟು ತಪ್ಪಿಸುವ ರಾಜ ಪುರೋಹಿತರಂತಿರುವ ಶಿವರಾಮಯ್ಯರವರು ಸಮಾಜಕ್ಕೆ ನೀಡಿದ ಕೊಡುಗೆ ಏನು? ಅಂಥವರಿಗೆ ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಲು ಯಾವ ನೈತಿಕತೆ ಇದೆ? ತನ್ನ ಮನೆಯ ಜಾನುವಾರುಗಳ ಚಿಕಿತ್ಸೆಗೆ ಯಾವ ಹೊತ್ತಿನಲ್ಲಾದರೂ ಬರುವ ದೇವಿಪ್ರಸಾದರನ್ನೇ ಮರಳಿ ಕೇರಳಕ್ಕೆ ಕಳುಹಿಸ್ತೇನೆ ಅಂತಾ ಹೇಳ್ತಾರಲ್ವಾ, ಇವರ ವಿಕೃತಿ ಎಂಥದ್ದು? ಮೊನ್ನೆ ಪ್ರತಿಭಟನಾ ಸಭೆಯಲ್ಲಿ ಮೂವರಿಗೆ ಧಿಕ್ಕಾರ ಕೂಗಿದ್ರು; ಆ ಮೂವರು ಪಂಜದಲ್ಲಿ ಮಾಡಿದ ಸೇವೆಯ ಒಂದು ಅಂಶವನ್ನಾದರೂ ಮೊನ್ನೆ ಭಾಷಣ ಮಾಡಿದವರು ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ , ನ್ಯಾಯವಾದಿ ಎಂ. ವೆಂಕಪ್ಪ ಗೌಡ ಮಾತನಾಡಿ ಪಂಚಾತಿಕೆಯ ಮೂಲಕ ಮುಗಿದ ವಿಷಯವನ್ನು ಬಿಜೆಪಿ ಯವರು ತಮ್ಮ ರಾಜಕೀಯ ಲಾಭ ಪಡೆಯಲು ಮತ್ತೆ ಎಬ್ಬಿಸಲು ವೆಂಕಪ್ಪ ಗೌಡರನ್ನು ಬಳಕೆ ಮಾಡಿಕೊಂಡಿದ್ದಾರೆ. ಬಿಜೆಪಿಯವರಿಗೆ ಬೇಕಾದದ್ದೇ ಸಂಘರ್ಷ, ರಕ್ತಪಾತ. ಬಿಜೆಪಿಯವರೇ, ಪಂಜದ ಕಾಂಗ್ರೆಸ್ ನಾಯಕರನ್ನು , ಕಾರ್ಯಕರ್ತರನ್ನು ಕೆಣಕಿದರೆ ಜಾಗ್ರತೆ; ಅವರ ಜೊತೆ ನಾವಿದ್ದೇವೆ ಎಂದರು.

ಸ್ಟೇಟಸ್ ಹಾಕಿದ ವಿಷಯ ಇವರು ಪ್ರಚಾರ ಮಾಡೋದಿಲ್ಲ, ಯಾಕೆಂದರೆ ಅವರಿಗೆ ತೊಂದರೆಯಾಗುತ್ತದೆ. ಅದಕ್ಕಾಗಿ ಅಂಗಡಿ ಮುಚ್ಚಿದ ವಿಷಯದಲ್ಲಿ ಸುಳ್ಳು ಹರಡುತ್ತಾರೆ. ಮೊನ್ನೆ ಪ್ರತಿಭಟನಾ ಸಭೆಯಲ್ಲಿ ಸರಕಾರದ ಭಾಗ್ಯಗಳ ಬಗ್ಗೆ ಟೀಕೆ ಮಾಡಿದ್ದಾರೆ. ಆದರೆ ಪ್ರತಿಭಟನೆಯಲ್ಲಿ ಇದ್ದವರು ಒಂದಲ್ಲ ಒಂದು ಭಾಗ್ಯ ಪಡೆದವರೇ. ಕೆಲವರೆಲ್ಲ ಗ್ರಾಮ ವನ್ ಗೆ ಹಿಂದಿನ ಬಾಗಿಲಿನಿಂದ ಬಂದು ಅಪ್ಲೈ ಮಾಡಿದವರು ಎಂದು ವೆಂಕಪ್ಪ ಗೌಡರು ವ್ಯಂಗ್ಯವಾಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಮಹೇಶ್ ಕುಮಾರ್ ಕರಿಕ್ಕಳ , ತಮ್ಮ ರಾಜಕೀಯ ಬೇಳೆ ಬೇಯಿಸಲು ಬಿಜೆಪಿಯವರು ವೆಂಕಪ್ಪರನ್ನು ದಾಳವಾಗಿ ಉಪಯೋಗಿಸಿಕೊಂಡಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದೇ ಇವರ ಕೆಲಸ.
ನಾನು, ಡಾ. ದೇವಿಪ್ರಸಾದ್, ರಜಿತ್ ಭಟ್ ಮತ್ತು ಕಾಂಗ್ರೆಸ್ ಪಂಜ ವ್ಯಾಪ್ತಿಯಲ್ಲಿ ಮಾಡಿದ ಕೆಲಸಗಳೇನು? ಬಿಜೆಪಿಯವರು ಮಾಡಿದ ಕೆಲಸಗಳೇನು ಎಂಬ ಬಗ್ಗೆ ಒಂದೇ ವೇದಿಕೆಯಲ್ಲಿ ಬಹಿರಂಗವಾಗಿ ಚರ್ಚಿಸೋಣ. ನಾವು ಸಿದ್ಧರಿದ್ದೇವೆ ಎಂದರು.

ನಾವೇನೂ ವೆಂಕಪ್ಪರ ಅಂಗಡಿ ಬಂದ್ ಮಾಡಲು ಒತ್ತಾಯ ಮಾಡಿರಲಿಲ್ಲ. ಅವರೇ ಹೆದರಿಕೆಯಿಂದ ಎರಡು ದಿವಸ ಬಂದ್ ಮಾಡಿ ಎಲ್ಲಿಗಾದರೂ ಹೋಗುತ್ತೇನೆ ಎಂದು ಹೇಳಿದ್ದು. ಆದರೆ ಬಿಜೆಪಿ ಪ್ರತಿಭಟನೆಯಲ್ಲಿ ನಮಗೇ ಧಿಕ್ಕಾರ ಹಾಕಿದ್ದಾರೆ. ವೆಂಕಪ್ಪರು ನನ್ನ ಜೊತೆ ಮಾತನಾಡಿದ ಎಲ್ಲ ಆಡಿಯೋ ದಾಖಲೆ ನನ್ನ ಜೊತೆ ಇದೆ. ಇದುವೆ ನಮ್ಮ ಸತ್ಯದರ್ಶನ ಎಂದು ಹೇಳಿದರು.

ಲಕ್ಷ್ಮೀಶ ಗಬ್ಬಲಡ್ಕ ಕಾರ್ಯಕ್ರಮ ನಿರೂಪಿಸಿ, ಪಂಜ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ವಂದಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪಂಜ ವಲಯ ಕಾಂಗ್ರೆಸ್ ಅಧ್ಯಕ್ಷ ಕೇಶವ ಕುದ್ವ ಉಪಸ್ಥಿತರಿದ್ದರೆ ಸುಳ್ಯ ಮತ್ತು ಕಡಬ ಬ್ಲಾಕ್ ಗಳ ಬಹುತೇಕ ಪ್ರಮುಖ ನಾಯಕರು ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

ಪೆನ್ ಡ್ರೈವ್ ಬಿಡುಗಡೆ

ವೆಂಕಪ್ಪರು ಮಹೇಶ್ ಕುಮಾರ್ ಕರಿಕ್ಕಳರ ಜೊತೆ ಮೊಬೈಲ್ ಮೂಲಕ ನಡೆಸಿದ ಸಂಭಾಷಣೆಯನ್ನು ಪೆನ್ ಡ್ರೈವ್ ಮೂಲಕ ಕಾಂಗ್ರೆಸ್ ನಾಯಕರು ಸಂಗ್ರಹಿಸಿಟ್ಟಿದ್ದು ಅದರಲ್ಲಿ ಒಂದನ್ನು ಸಭೆಯಲ್ಲಿ ಕೇಳಿಸಲಾಯಿತು.