ಬಾಳಿಲ: ನೂತನ ಕೃಷಿಪರಿವಾರ ಸಂಸ್ಥೆಯ ಸೇವೆಗಳ ಉದ್ಘಾಟನೆ

0

ಕೃಷಿ ಪರಿವಾರ ಸಂಸ್ಥೆ ಬಾಳಿಲ ಇದರ ಕೃಷಿ ಸೇವೆಗಳ ಉದ್ಘಾಟನಾ ಕಾರ್ಯಕ್ರಮವು ಮುಪ್ಪೇರ್ಯ ಧರ್ಮಶಾಸ್ತಾ ಮಂದಿರದ ಸಭಾಂಗಣದಲ್ಲಿ ಸೆ. 01ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಪತ್ರಕರ್ತರೂ ಆದ ಮಹೇಶ್ ಪುಚ್ಚಪ್ಪಾಡಿ ಉದ್ಘಾಟಿಸಿದರು.


ಸಭಾಧ್ಯಕ್ಷತೆಯನ್ನು ಬಾಳಿಲ ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ಯು. ರಾಧಾಕೃಷ್ಣ ರಾವ್ ವಹಿಸಿ, ಕೃಷಿ ಪರಿವಾರದ ಮೂಲಕ ಕೃಷಿಕರ ಕಾರ್ಮಿಕರ ಸಮಸ್ಯೆ ಸೇರಿದಂತೆ ಕೃಷಿಕರಿಗೆ ಎದುರಾಗುವ ಸವಾಲುಗಳನ್ನು ಬಗೆಹರಿಸಬಹುದಾಗಿದ್ದು, ಇದು ಕೃಷಿಕರಿಗೆ ಅಗತ್ಯವಾಗಿ ಬೇಕಾದ ವ್ಯವಸ್ಥೆಯಾಗಿದೆ. ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಯಶಸ್ಸು ಹೊಂದಲಿ ಎಂದು ಶುಭ ಹಾರೈಸಿದರು.


ಸಂಸ್ಥೆಯ ಮುಖ್ಯಸ್ಥರಲ್ಲಿ ಓರ್ವರಾದ ರಾಜೇಶ್ ಸುವರ್ಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಪರಿವಾರ ಸಂಸ್ಥೆಯು ಕೃಷಿಕರಿಗೆ ಅಗತ್ಯವಾದ ಕೃಷಿ ಚಟುವಟಿಕೆಗಳಿಗೆ ನುರಿತ ಕಾರ್ಮಿಕರನ್ನು ಒದಗಿಸಲಿದೆ. ಇದು ಒಂದು ಸಾಂಸ್ಥಿಕ ರೂಪದಲ್ಲಿ ನಡೆಯುವ ವ್ಯವಸ್ಥೆಯಾಗಿದ್ದು, ಕೃಷಿಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನೈಪುಣ್ಯತೆ ಹೊಂದಿರುವ ಕಾರ್ಮಿಕರನ್ನು ಒದಗಿಸುವ ಕಾರ್ಯ ಮಾಡುತ್ತದೆ. ಇದರಿಂದಾಗಿ ಕೃಷಿಕರ ಕೆಲಸ ಕಾರ್ಯಗಳು ಕಾಲಕಾಲಕ್ಕೆ ನಡೆಯುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯವಿದೆ ಎಂದರು.


ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ನಿವೃತ್ತ ಕಸ್ಟಮ್ ಅಧಿಕಾರಿ ಆರ್.ಕೆ ಭಟ್ ಕುರುಂಬುಡೇಲು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ರಾವ್ ಕಿಲಂಗೋಡಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ. ಸಂಘದ ಮಾಜಿ ಅಧ್ಯಕ್ಷ ಕೊಸಪ್ಪಗೌಡ ಮಗುಪ್ಪು, ಶ್ರೀದೇವಿ ಅಗ್ರಿಟೆಕ್ ನಿಂತಿಕಲ್ಲು ಇದರ ಮ್ಹಾಲಕರಾದ ತಿಮ್ಮಪ್ಪ ರೈ ಹಾಗೂ ಬಾಳಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಮೇಶ್ ರೈ ಅಗಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.


ಸಂಸ್ಥೆಯ ಇನ್ನೋರ್ವ ಮುಖ್ಯಸ್ಥರಾದ ಬಾಲಕೃಷ್ಣ ಗೌಡ ಮರೆಂಗಾಲ ವಂದಿಸಿದರು.
ಶ್ರೀಮತಿ ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.