ಅನಾಥ ಸ್ಥಿತಿಯಲ್ಲಿರುವ ವೃದ್ಧ ವ್ಯಕ್ತಿಯನ್ನು ರಕ್ಷಣೆ ಮಾಡಬೇಕೆಂದು ಸ್ಥಳೀಯರ ಮನವಿ

0

ಅನಾಥ ಸ್ಥಿತಿಯಲ್ಲಿರುವ ವೃದ್ಧ ವ್ಯಕ್ತಿಯನ್ನು ರಕ್ಷಣೆ ಮಾಡಬೇಕೆಂದು ಸ್ಥಳೀಯರು  ಮನವಿ ಮಾಡಿದ್ದಾರೆ.

ಕಳೆದ ಒಂದು ವಾರ ಮೊದಲು ಕುಂಬ್ರ ಹೆದ್ದಾರಿ ಬಳಿಯಿಂದ ಅನಾಥವಾಗಿ ಬಿದ್ದಿದ್ದ ಓರ್ವ ವೃದ್ಧರನ್ನು ಸ್ಥಳೀಯರು ಸೇರಿ ಸುಳ್ಳಕ್ಕೆ ಬರುವ ಬಸ್ಸಿನಲ್ಲಿ ಕಳುಹಿಸಿದ್ದರು.
ಇದೀಗ ಒಂದು ವಾರದಿಂದ ಆ ವೃದ್ದ ವ್ಯಕ್ತಿ ಸುಳ್ಯ ನಗರದ ಬೀದಿಗಳಲ್ಲಿ ಮಳೆ ಮತ್ತು ಗಾಳಿಯಿಂದ ಒದ್ದೆಯಾಗಿ ಅಂಗಡಿ ಮುಂಗಟುಗಳ ಮುಂಭಾಗ ಆಶ್ರಯ ಪಡೆದುಕೊಂಡು ದಯನೀಯ ಸ್ಥಿತಿಯಲ್ಲಿ ಕಂಡು ಬರುತ್ತಿದ್ದಾರೆ.
ನಿನ್ನೆ ರಾತ್ರಿ ನಾವೂರು ಜಂಕ್ಷನ್ ಬಳಿ ಅಂಗಡಿಯೊಂದರ ಮುಂಭಾಗ ವೃದ್ಧ ವ್ಯಕ್ತಿ ಆಶ್ರಯ ಪಡೆದಿದ್ದು ನಿನ್ನೆ ಸುರಿದ ಭಾರೀ ಮಳೆಗೆ ನೆನೆದು ಒದ್ದೆಯಾಗುತ್ತಿದ್ದ ದೃಶ್ಯವನ್ನು ಕಂಡು ಸ್ಥಳೀಯರು ಊಟ ವ್ಯವಸ್ಥೆಯನ್ನು ನೀಡಿ ಸಹಕರಿಸಿದ್ದಾರೆ. ಇವರು ತಮ್ಮ ಹೆಸರು ವೆಂಕಟರಮಣ ಎಂದು ಹೇಳುತ್ತಿದ್ದು ಪುತ್ತೂರು ತಾಲೂಕು ಹಾರ್ಲಪದವು ನಿವಾಸಿಯಾಗಿದ್ದಾರೆ. ಪತ್ನಿ ನಿಧನರಾಗಿದ್ದು ಮಕ್ಕಳು ಯಾರು ಇರುವುದಿಲ್ಲ ಎಂದು ಹೇಳಿದ್ದಾರೆ. ಸಹೋದರ ಮತ್ತು ಸಹೋದರಿಯರು ಇದ್ದು ಒಬ್ಬಾಕೆ ಸಹೋದರಿ ಗಾಂಧಿನಗರ ಶಾಲೆಯ ಬಳಿ ಇದ್ದಾರೆ ಎಂದು ಅವರು ಹೇಳುತ್ತಿದ್ದಾರೆ.
ಈ ಘಟನೆಯ ಕುರಿತು ಸುದ್ದಿಯೊಂದಿಗೆ ಮಾತನಾಡಿರುವ ಸ್ಥಳೀಯರು ವ್ಯಕ್ತಿ ಆರೋಗ್ಯ ಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿಯೇ ಸಂಬಂಧಪಟ್ಟವರು ಅಥವಾ ಇಲಾಖೆಯವರು ಕೂಡಲೇ ಸ್ಪಂದಿಸಿ ಇವರ ರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.