ಇಬ್ಬರು ಮಕ್ಕಳ‌ ಚಿಕಿತ್ಸಾ ಸಹಾಯಾರ್ಥವಾಗಿ ಕ್ರಿಕೆಟ್ ಪಂದ್ಯಾಟ ಆಯೋಜನೆ

0

 

 

ಫ್ರೆಂಡ್ಸ್ ಪೇರಾಲು ತಂಡದ ವಿನೂತನ ‌ಪ್ರಯತ್ನ

 


ತನ್ನ ಸಂಘಟನೆಯ ಲಾಭ ಅಥವಾ ವೈಯಕ್ತಿಕವಾಗಿ ಲಾಭಕ್ಕಾಗಿ ವಿವಿಧ ಪಂದ್ಯಾಟಗಳನ್ನು ಆಯೋಜಿಸುವ ಇಂದಿನ ಕಾಲ ಘಟ್ಟದಲ್ಲಿ ಮಂಡೆಕೋಲು ಗ್ರಾಮದ ಫ್ರೆಂಡ್ಸ್ ಪೇರಾಲು ಎಂದು ಸುಮಾರು 25 ಯುವಕರ ತಂಡವೊಂದು ಇಬ್ಬರು‌ ಮಕ್ಕಳ ಚಿಕಿತ್ಸಾ ಸಹಾಯಾರ್ಥವಾಗಿ ಕ್ರಿಕೆಟ್ ಪಂದ್ಯಾಟ ನಡೆಸುತ್ತಿದೆ. ಇವರ ಈ ಚಿಂತನೆಗೆ ಈಗ ಹಲವರು ಶಹಬ್ಬಾಸ್ ಎನ್ನುತ್ತಿದ್ದಾರೆ.

ಗುತ್ತಿಗಾರಿನ ಸಮೀಕ್ಷಾ ಎಂಬ ಬಾಲಕಿ ಕ್ಯಾನ್ಸರ್ ಕಾಯಿಲೆಯಿಂದ ಹಾಗೂ ಸುಳ್ಯದ ಹಾರ್ದಿಕ್ ಎಂಬ ಬಾಲಕ ಕಿಡ್ನಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಬ್ಬರ ಚಿಕಿತ್ಸೆಗೆ ಈಗಾಗಲೇ ವಿವಿಧ ಸಂಘ ಸಂಸ್ಥೆಗಳು ಸಹಾಯ ಹಸ್ತ ನೀಡಿವೆ.

ಇದೀಗ ಪೇರಾಲಿನ ಸಮಾನ ಮನಸ್ಕ ಯುವಕರು ಸೇರಿ 8 ಜನರ ಮುಕ್ತ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದಾರೆ. ಅ.2 ರಂದು ಪೇರಾಲು ಶಾಲಾ ವಠಾರದಲ್ಲಿ ಪಂದ್ಯಾಟ ನಡೆಯಲಿದ್ದು, ಗೆದ್ದ ತಂಡಗಳಿಗೆ ಬಹುಮಾನವು ಇದೆ.

ಆದರೆ ಪಂದ್ಯಾಟದಲ್ಲಿ ಭಾಗವಹಿಸುವ ತಂಡಕ್ಕೆ ನಿಗದಿ ಮಾಡಲಾದ ನೋಂದಣಿ ಶುಲ್ಕ ರೂ.800 ರನ್ನು ಸಂಗ್ರಹಿಸಿ ಹಾಗೂ ಬರುವ ಇತರ ಲಾಭವನ್ನು ಸೇರಿಸಿ ಆ ಇಬ್ಬರು ಮಕ್ಕಳ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.

“ನಾವು 20-25 ಮಂದಿ ಯುವಕರು ಪೇರಾಲಿನಲ್ಲಿ ಸೇರಿ ಈ ಚಿಂತನೆ ಹಮ್ಮಿಕೊಂಡಿದ್ದೇವೆ.‌ ನಮ್ಮ ಯೋಜನೆ ತಿಳಿದು ಈಗಾಗಲೇ 25 ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿಕೊಂಡಿವೆ. ಇನ್ನೂ ಹೆಚ್ಚಿನ ತಂಡ ಬರಬೇಕೆಂಬ ನಮ್ಮ ಅಪೇಕ್ಷೆ. ಇದು ಲಾಭಕ್ಕಾಗಿ ಅಲ್ಲ. ಇಬ್ಬರು ಮಕ್ಕಳ ಜೀವಕ್ಕಾಗಿ ನಮ್ಮ ಅಳಿಲು ಸೇವೆ” ಎಂದು ಪಂದ್ಯಾಟ ಸಂಘಟಕರಲ್ಲೊಬ್ಬರಾದ ಅಶ್ವಿನ್ ಪೇರಾಲು ತಿಳಿಸಿದ್ದಾರೆ.