ಜೇಸಿಐ ಪಂಜ ಪಂಚಶ್ರೀ ರಜತ ರಶ್ಮಿ ಸಂಭ್ರಮ-ಆಳ್ವಾಸ್ ಸಾಂಸ್ಕೃತಿಕ ವೈಭವ, ಸಂಘಟನೆಗಳು ದೇಶದ ಸಂಜೀವಿನಿ-ಎಸ್ ಅಂಗಾರ, ಮನೋರಂಜನೆಗಳು ಒಳ್ಳೆಯ ಮನಸುಗಳ ನಿರ್ಮಿಸ ಬೇಕು-ಡಾ.ಎಂ.ಮೋಹನ್ ಆಳ್ವ

0

ಜೇಸಿಐ ಪಂಜ ಪಂಚಶ್ರೀ ಇದರ ಬೆಳ್ಳಿ ಹಬ್ಬ-‘ರಜತ ರಶ್ಮಿ’ ಕಾರ್ಯಕ್ರಮದ ಅಂಗವಾಗಿ ಆಳ್ವಾಸ್ ಸಾಂಸ್ಕೃತಿಕ ವೈಭವ ನ.11. ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಉದ್ಘಾಟಿಸಿ ಮಾತನಾಡಿ”
“ಈ ಮಣ್ಣಿನ ಸತ್ಯತೆಗಳನ್ನು ಉಳಿಸಿ ಬೆಳೆಸ ಬೇಕು.ಅಂತಹ ಕಾರ್ಯಗಳು ಉಳಿವಿಗೆ, ಯುವ ಜನರಿಗೆ ಆ ಕುರಿತು ಮಾರ್ಗದರ್ಶನ ನೀಡುವಲ್ಲಿ ಸಂಘಟನೆಗಳು ಮುಖ್ಯ ಪಾತ್ರವಹಿಸಿದೆ. ಸಂಘಟನೆಗಳು ಈ ದೇಶದ ಸಂಜೀವಿನಿ”ಎಂದು ಹೇಳಿದರು.


ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಸಭಾಧ್ಯಕ್ಷತೆ ವಹಿಸಿದ್ದರು.
‘ರಜತ ಪಥ’ ಸ್ಮರಣ ಸಂಚಿಕೆ ಮುಖ ಪುಟವನ್ನು ಮುಖ್ಯ ಅತಿಥಿ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅನಾವರಣ ಗೊಳಿಸಿದರು.ಬಳಿಕ ಅವರು ಮಾತನಾಡಿ”ದೇಶದ ಅಮೂಲ್ಯ ಸಂಪತ್ತು, ಯುವ ಸಂಪತ್ತು. ಯುವ ಜನರನ್ನು ಸಂಪನ್ಮೂಲರನ್ನಾಗಿ ಹೇಗೆ ರೂಪಿಸ ಬೇಕೆಂದು ನಾವು ಆಲೋಚಿಸ ಬೇಕು. ಅವರಿಗೆ ಈ ಕಾಲಕ್ಕೆ ಬೇಕಾಗುವ ವಿದ್ಯಾಭ್ಯಾಸ ನೀಡ‌ ಬೇಕು.ಅವರ ಮನಸ್ಸು, ಹೃದಯವನ್ನು ಉತ್ತಮ ಇರುವಂತೆ ಕಾಪಾಡುವುದು ಮಾರ್ಗದರ್ಶ ನೀಡುವುದು ನಮ್ಮ ಕರ್ತವ್ಯ.ಇಲ್ಲವಾದರೆ ನಾವು ಚಲಾವಣೆ ಇಲ್ಲದ ನಾಣ್ಯದಂತೆ.” ಎಂದು ಹೇಳಿದರು.


ಮನೋರಂಜನೆಯಿಂದ ಸಂದೇಶ :
“ಮನೋರಂಜನೆಗಳು ಸತ್ಯ ವಿಚಾರಗಳಿಂದ ಕೂಡಿ ಉತ್ತಮ ಸಂದೇಶಗಳಿಂದ ಪ್ರೇಕ್ಷಕರ ಮನಸುಗಳನ್ನು ಕಟ್ಟುವಂತಿರಬೇಕು.
ಪ್ರೇಕ್ಷಕರ ಆಕರ್ಷಣೆಗಾಗಿ ಕೆಟ್ಟ, ಸುಳ್ಳು ವಿಚಾರಗಳು ಮನೋರಂಜನೆಯಲ್ಲಿ ಬೆರೆತರೆ
ಅದರಿಂದ ಸಮಾಜಕ್ಕೆ ಅಪಾಯ ಆಗಬಹುದು.” ಎಂದು ಡಾ.ಎಂ.ಮೋಹನ್ ಆಳ್ವರ್ ಹೇಳಿದರು.


ದ.21ರಿಂದ ಮೂಡಬಿದ್ರೆಯಲ್ಲಿ ಅಂತರಾಷ್ಟ್ರೀಯ ಜಾಂಬೂರಿ :
“ಮುಂದಿನ.ತಿಂಗಳು ದ.21ರಿಂದ ದ.27 ತನಕ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಇದೇ ಮೊದಲ ಬಾರಿ
ಭಾರತದಲ್ಲಿ ನಡೆಯುತ್ತಿದ್ದು , ಅದು ನಮ್ಮ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಸುವುದಾಗಿ ಜವಾಬ್ದಾರಿ ವಹಿಸಿದ್ದೇವೆ.ದೇಶ ವಿದೇಶದಿಂದ 40 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮತ್ತು 10 ಸಾವಿರ ತರಬೇತುದಾರರು ಆಗಮಿಸುತ್ತಾರೆ.ದಿನ ಲಕ್ಷಾಂತರ ಜನರ ಸೇರುತ್ತಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ. ಕೃಷಿ ಮೇಳ ,ಆಧುನಿಕ ಕೃಷಿ ಪದ್ಧತಿಗಳು, ಪುಸ್ತಕ ಮೇಳ ,ಹೂ ಮೇಳ, ವಿಜ್ಞಾನ ಮೇಳ,ಕಲಾ ಮೇಳ ಮೊದಲಾದವುಗಳು ಜರುಗಲಿದೆ.


ಇದು ನಮ್ಮ ದೇಶದ ಕಾರ್ಯಕ್ರಮ ತಾವೆಲ್ಲರೂ ಬನ್ನಿ. ಸುಳ್ಯ ತಾಲೂಕಿನ ಎಲ್ಲರ ಸಹಕಾರ ಬೇಕು.ಕಾರ್ಯಕ್ರಮಕ್ಕೆ ಸುಮಾರು 30 ಕೋಟಿ ರೂ ಖರ್ಚು ಇದೆ.ಇದು ನಮ್ಮೆಲ್ಲರ ಕಾರ್ಯಕ್ರಮವಾದರಿಂದ ನಿಮ್ಮ ಸಣ್ಣ ದೇಣಿಗೆ , ವಸ್ತು ರೂಪದ ಹೊರೆ ಕಾಣಿಕೆ ಸಲ್ಲಿಸಿಸುವುದರ ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಾಗ ಬೇಕು”.ಎಂದು ಅವರು ಕಾರ್ಯಕ್ರಮದ ಕುರಿತು ವಿವರಿಸಿದರು.


ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ, ಸುಳ್ಯ ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ಸುಧಾಕರ್ ರೈ, ಪಂಜ ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ಶಶಿಧರ ಪಳಂಗಾಯ,
ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಮತ್ತು ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಬೆಳ್ಳಿ ‌ಹಬ್ಬ ಸಮಿತಿಯ ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ, ಬೆಳ್ಳಿ ‌ಹಬ್ಬ ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಆಕ್ರಿಕಟ್ಟೆ, ಘಟಕದ ನಿಕಟ ಪೂರ್ವಾಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ,ಕಾರ್ಯದರ್ಶಿ ಕೌಶಿಕ್ ಕುಳ ವೇದಿಕೆಯಲ್ಲಿ .
ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ
ಚಂದ್ರಶೇಖರ ಇಟ್ಯಡ್ಕ ವೇದಿಕೆಗೆ ಆಹ್ವಾನಿಸಿದರು.ಗುರುಪ್ರಸಾದ್ ತೋಟ ಜೇಸಿ ವಾಣಿ ನುಡಿದರು.ಸಂತೋಷ್ ಜಾಕೆ ಸ್ವಾಗತಿಸಿ ಪ್ರಾಸ್ತಾವಿಕ ಗೈದರು.ರಜತ ಪಥ ಸ್ಮರಣ ಸಂಚಿಕೆಯ ಕುರಿತು ಸವಿತಾರ ಮುಡೂರು ವಿವರಿಸಿದರು.ರಾಜೇಶ್ ಕಂಬಳ ವಂದಿಸಿದರು.


ಪ್ರೇಕ್ಷಕರ ಮನಗೆದ್ದ ಸಾಂಸ್ಕೃತಿಕ ವೈಭವ: ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಸ್ತುತಿಯಲ್ಲಿ ಸಾಂಸ್ಕೃತಿಕ ವೈಭವ ಪ್ರೇಕ್ಷಕರ ಮನಗೆದ್ದಿತ್ತು.ಪಂಜ ಪಂಚಲಿಂಗೇಶ್ವರ ದೇವಳದ ಮುಂಭಾಗದ ಮೈದಾನದಲ್ಲಿ ಹಾಕಿದ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ನಡೆದು, ಪ್ರೇಕ್ಷಕರಿಂದ ಮೈದಾನ ತುಂಬಿತ್ತು.ಆಳ್ವಾಸ್ ವಿದ್ಯಾ ಸಂಸ್ಥೆಯ ಸುಮಾರು 350 ಕ್ಕೂ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈಭವದಲ್ಲಿ ಪಾಲ್ಗೊಂಡಿದ್ದರು.


ಶಾಸ್ತ್ರೀಯ ನೃತ್ಯ -ನವದುರ್ಗೆಯರು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಪಂಜಾಬಿನ ಬಾಂಗ್ಡಾ ನೃತ್ಯ,ಆಂಧ್ರದ ಜನಪದ ಬಂಜಾರ ನೃತ್ಯ, ಒಡಿಸ್ಸಿ ನೃತ್ಯ , ಮಲ್ಲಕಂಬ, ಬಡಗುತಿಟ್ಟು ಯಕ್ಷಗಾನ- ಶ್ರೀರಾಮ ಪಟ್ಟಾಭಿಷೇಕ, ಕಥಕ್- ನವರಂಗ್, ಡೊಳ್ಳು ಕುಣಿತ, ಪುರುಲಿಯಾ, ತೆಂಕುತಿಟ್ಟು ಯಕ್ಷಗಾನ -ಅಗ್ರ ಪೂಜೆ, ವಂದೇ ಮಾತರಂ ಮೊದಲಾದ ನೃತ್ಯಗಳು ಪ್ರದರ್ಶನ ಗೊಂಡಿತು.


ಇಂದು ಸಂಜೆ ಸಮಾರೋಪ:
ನ. 12ರಂದು ಸಂಜೆ 6ರಿಂದ ಸಮಾರೋಪ ಸಮಾರಂಭವು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ವಿಶ್ರಾಂತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ‘ಭವ್ಯ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ’ ಎಂಬ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್ ‘ರಜತ ರಶ್ಮಿ ಸಾಧನೆಯ ಹಾದಿಯಲ್ಲಿ ಬೆಳ್ಳಿ ಬೆಳಕು’ ಎಂಬ ವಿಷಯದಲ್ಲಿ ಸಮಾರೋಪ ಭಾಷಣ ಮಾಡಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಕಮಲ ಪತ್ರ ಪುರಸ್ಕಾರ ಪಡೆಯಲಿದ್ದಾರೆ. ವಲಯಾಧ್ಯಕ್ಷ ಜೇಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತ ಪುರಸ್ಕರಿಸಲಿರುವರು. ಜೇಸಿಐ ವಲಯ 15ರ ಪೂರ್ವ ವಲಯ ಅಧ್ಯಕ್ಷರುಗಳು ಉಪಸ್ಥಿತರಿರುವರು .


ಯುವ ತೇಜಸ್ಸು ಟ್ರಸ್ಟ್ ಪಂಜ, ಶಾರದಾಂಬ ಭಜನಾ ಮಂಡಳಿ ಪಂಜ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಗಳಿಗೆ ಪುರಸ್ಕಾರ ನಡೆಯಲಿದೆ.
ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ವಿತರಣೆ ನಡೆಯಲಿದೆ. ಬಳಿಕ ಪ್ರತಿಷ್ಠಿತ ತಂಡಗಳ ಮುಕ್ತ ಡ್ಯಾನ್ಸ್ ಸ್ಪರ್ಧೆ ಸಿಲ್ವರ್ ಸ್ಟೆಪ್ಸ್ 2022 ನಡೆಯಲಿದೆ.