ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ನಡೆದ ಕಾನೂನು ಅರಿವು ಕಾರ್ಯಕ್ರಮಕ್ಕೆ ತೆರೆ, ಸೈಂಟ್ ಬ್ರಿಜೀಡ್ಸ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದೊಂದಿಗೆ ಸಂಪನ್ನ

0

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ನಡೆದ ಕಾನೂನು ಅರಿವು ಮತ್ತು ಜಾಗೃತಿ ಅಭಿಯಾನ ನವಂಬರ್ 14ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮದೊಂದಿಗೆ ಸುಳ್ಯ ಸೆಂಟ್ ಬ್ರಿಜೀಡ್ಸ್ ವಿದ್ಯಾಸಂಸ್ಥೆಯಲ್ಲಿ ಸಂಪನ್ನಗೊಂಡಿತು.

ಸುಳ್ಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ ಹಾಗೂ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಕುಮಾರಿ ಅರ್ಪಿತಾರವರ ನೇತೃತ್ವದಲ್ಲಿ ಕಳೆದ 14 ದಿನಗಳಿಂದ ಸುಳ್ಯದ ಸುಮಾರು 20ಕ್ಕೂ ಹೆಚ್ಚು ಇಲಾಖೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸುಳ್ಯ, ಪೊಲೀಸ್ ಇಲಾಖೆ ಸುಳ್ಯ, ಶಿಕ್ಷಣ ಇಲಾಖೆ ಸುಳ್ಯ, ಆರೋಗ್ಯ ಇಲಾಖೆ ಸುಳ್ಯ, ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಸುಳ್ಯ, ಅರಣ್ಯ ಇಲಾಖೆ ಸುಳ್ಯ, ಸುದ್ದಿ ಸಮೂಹ ಮಾಧ್ಯಮ ಸುಳ್ಯ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಭ್ರಷ್ಟಾಚಾರದ ಕುರಿತು ಜಾಗೃತಿ ಅಭಿಯಾನ, ಮಾದಕ ವಸ್ತುಗಳ ಕುರಿತು ಜಾಗೃತಿ ಅಭಿಯಾನ, ಪೋಕ್ಸೋ ಕಾಯ್ದೆಯ ಕುರಿತು ಅರಿವು ಕಾರ್ಯಕ್ರಮ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಬಗ್ಗೆ ಜಾಗೃತಿ ಅಭಿಯಾನ, ಸೈಬರ್ ಕ್ರೈಂ ಮತ್ತು ಮಾನವ ಕಳ್ಳ ಸಾಗಾಣಿಕೆ ಕುರಿತು ಜಾಗೃತಿ ಅಭಿಯಾನ, ಮತ್ತು ಹಲವಾರು ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡಲಾಯಿತು.


ಇಂದು ನಡೆದ ಸಮಾಪನ ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಫಾದರ್ ವಿಕ್ಟರ್ ಡಿ ‘ಸೋಜ ವಹಿಸಿದ್ದರು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆ ಸುಳ್ಯ ಇದರ ಮೇಲ್ವಿಚಾರಕ ಕಿಶೋರ್ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದರು.
ಹಿರಿಯ ನ್ಯಾಯವಾದಿ ಎಂ ವೆಂಕಪ್ಪಗೌಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳ ದಿನಾಚರಣೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಸಭೆಯಲ್ಲಿ ಸೇರಿದ ಸರ್ವರಿಗೆ ಎಂ ವೆಂಕಪ್ಪಗೌಡರ ವತಿಯಿಂದ ಸಿಹಿ ತಿಂಡಿ ವಿತರಣೆ ನಡೆಯಿತು.
ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಮನರಂಜಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ನಗರ ಪಂಚಾಯತ್ ಸದಸ್ಯರಾದ ಧೀರಾ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಗೋಡ್ ಫ್ರೀ ಮೊಂತೇರೋ, ಪೋಷಕರ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪ್ರವೀಣ್, ಸುಳ್ಯ ನ್ಯಾಯಾಲಯದ ಪ್ಯಾನೆಲ್ ವಕೀಲರಾದ ರಾಜೇಶ್ ಬಿ ಜಿ, ಉಷಾ ಪಿ ವಿ, ಶಾಲಾ ನಾಯಕಿ ಕು. ಶ್ರೀಜಾ ಎ ವಿ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಆಂತೋನಿ ಮೇರಿ ಸ್ವಾಗತಿಸಿ, ವಕೀಲರಾದ ರಾಮಚಂದ್ರ ಶ್ರೀಪಾದ ಹೆಗಡೆ ವಂದಿಸಿದರು. ಶಿಕ್ಷಕಿ ಶ್ರೀಮತಿ ವಲ್ಸ ಕಾರ್ಯಕ್ರಮ ನಿರೂಪಿಸಿದರು.