ಬಿದ್ದು ಸಿಕ್ಕಿದ ನಗದು ಮತ್ತು ಬ್ಯಾಂಕ್ ದಾಖಲೆ ಪತ್ರಗಳಿದ್ದ ಪರ್ಸನ್ನು ಹಿಂತಿರುಗಿಸಿ ಪ್ರಾಮಾಣಿಕತೆ

0

ಹಳೆಗೇಟು ಪರಿಸರದ ಆಟೋ ಚಾಲಕ ರಶೀದ್ ಎಂಬುವವರು ನಗದು ಮತ್ತು ವಾಹನ ಚಾಲನಾ ಲೈಸೆನ್ಸ್, ಎಟಿಎಂ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಹೊಂದಿದ ಪರ್ಸ್ ಅನ್ನು ಇಂದು ಮುಂಜಾನೆ ಕೊಡಿಯಾಲ ಬೈಲು ಕಡೆ ಬಾಡಿಗೆ ಹೋದ ಸಂದರ್ಭದಲ್ಲಿ ಕಳೆದುಕೊಂಡಿದ್ದರು.
ಮರಳಿ ಸುಳ್ಯಕ್ಕೆ ಬಂದು ನೋಡಿದಾಗ ತಮ್ಮ ಪರ್ಸು ಕಳೆದುಕೊಂಡ ವಿವರ ತಿಳಿದು, ಮತ್ತೆ ಅದೇ ರಸ್ತೆಯಲ್ಲಿ ತೆರಳಿ ಹುಡುಕಾಟ ನಡೆಸಿದ್ದರು. ಆದರೆ ಅದು ಸಿಗದೇ ಇದ್ದಾಗ ಮರಳಿ ಸುಳ್ಯಕ್ಕೆ ಬಂದಿದ್ದರು.

ಘಟನೆ ನಡೆದ ಕೆಲವು ಸಮಯದ ಬಳಿಕ ಏನೆಕಲ್ಲು ನಿವಾಸಿ ರಂಗತರಂಗ ಗ್ರೂಪಿನ ಯುವ ಕಲಾವಿದ ಪುಷ್ಪರಾಜ್ ಎಂಬುವವರು ಇದೇ ರಸ್ತೆ ಮೂಲಕ ಸುಳ್ಯಕ್ಕೆ ಬರುತ್ತಿದ್ದಾಗ ಕೊಡಿಯಾಲ ಬೈಲು ಸಮೀಪ ರಸ್ತೆಯಲ್ಲಿ ಈ ಪರ್ಸ್ ಸಿಕ್ಕಿರುತ್ತದೆ. ಪರ್ಸಿನಲ್ಲಿ ನಗದು ಮತ್ತು ಇತರ ದಾಖಲೆಗಳನ್ನು ನೋಡಿದ ಇವರು
ಕೂಡಲೇ ಪರ್ಸಿನಲ್ಲಿದ್ದ ಆಧಾರ್ ಕಾರ್ಡ್ ಫೋಟೋವನ್ನು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ ತಮ್ಮ ವಾಟ್ಸಪ್ ಗ್ರೂಪಿನಲ್ಲಿ ಇದನ್ನು ತಿಳಿಯಪಡಿಸಿ ಕಳೆದುಕೊಂಡವರು ತಮ್ಮ ದೂರವಾಣಿ ನಂಬರಿಗೆ ಸಂಪರ್ಕಿಸುವಂತೆ ತಿಳಿಸಿದ್ದರು.
ಈ ವಿಷಯ ಗ್ರೂಪಿನಿಂದ ಗ್ರೂಪಿಗೆ ಶೇರ್ ಆಗಿ ಘಟನೆ ನಡೆದ ಕೇವಲ ಒಂದು ಗಂಟೆಯೊಳಗೆ ಪರ್ಸ್ ಕಳೆದುಕೊಂಡ ಆಟೋ ಚಾಲಕ ರಶೀದ್ ರವರಿಗೆ ಮಾಹಿತಿ ತಿಳಿದು ಬಂದಿದೆ.

ಕೂಡಲೆ ಅವರು ಪುಷ್ಪರಾಜ್ ರವರು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಕಳೆದುಕೊಂಡಿರುವ ಪರ್ಸಿನ ಬಗ್ಗೆ ವಿವರಗಳನ್ನು ಹೇಳಿ ಅವರನ್ನು ಸಂಪರ್ಕಿಸಿದಾಗ ಪುಷ್ಪರಾಜ್ ರವರು ಪರ್ಸನ್ನು ನೀಡಿರುತ್ತಾರೆ.

ರಸ್ತೆಯಲ್ಲಿ ಬಿದ್ದು ಸಿಕ್ಕಿದ ವಸ್ತುವನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ನೀಡಿ ಪ್ರಾಮಾಣಿಕತೆ ಮೆರೆದ ಪುಷ್ಪರಾಜ್ ರವರ ಕಾರ್ಯಕ್ಕೆ ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳು ವ್ಯಕ್ತವಾಗಿದೆ.