ಕುಕ್ಕೆಸುಬ್ರಹ್ಮಣ್ಯ: ಪುಷ್ಪಾಲಂಕೃತ ರಥದಲ್ಲಿ ಹೂತೇರ ಉತ್ಸವ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ದ ಚೌತಿಯ ದಿನವಾದ ಆದಿತ್ಯವಾರ ಪುಷ್ಪಾಲಂಕೃತ ರಥದಲ್ಲಿ ಶ್ರೀ ದೇವರ ಹೂವಿನ ತೇರಿನ ಉತ್ಸವವು ಭಕ್ತಿ ಸಡಗರದಿಂದ ನಡೆಯಿತು. ಮಹಾಪೂಜೆಯ ನಂತರ ಶ್ರೀ ದೇವಳದ ಹೊರಾಂಗಣದಲ್ಲಿ ಬಂಡಿ ಉತ್ಸವ, ಪಾಲಕಿ ಉತ್ಸವ ಹಾಗೂ ಸಂಗೀತ, ಮಂಗಳವಾದ್ಯ, ನಾದಸ್ವರ, ಬ್ಯಾಂಡ್ ಸುತ್ತುಗಳ ಬಳಿಕ ರಥಬೀದಿಗೆ ಶ್ರೀ ದೇವರ ಪ್ರವೇಶವಾಯಿತು.ಬಳಿಕ ಉತ್ತರಾಧಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು.

ಪುಷ್ಪರಥ :
ಬಳಿಕ ಸೇವಂತಿಗೆ, ಚೆಂಡು,ಗೊಂಡೆ,ಮಲ್ಲಿಗೆ,ತುಳಸಿ,ಕಾಕಡ,ಸುಗಂದರಾಜ,ಜೀನ್ಯ ಮೊದಲಾದ ಹೂವಿನಿಂದ ಅಲಂಕೃತವಾದ ಮತ್ತು ಜಗಮಗಿಸುವ ವಿದ್ಯುದ್ದೀಪಾಲಂಕಾರದ ಸೊಬಗಿನ ಹೂವಿನ ತೇರಿನಲ್ಲಿ ಶ್ರೀ ದೇವರು ಉತ್ಸವದಲ್ಲಿ ಕಾಶಿಕಟ್ಟೆಗೆ ತೆರಳಿದರು. ಆನೆ ಸೇರಿದಂತೆ ಬಿರುದಾವಳಿಗಳಾದ ತಂಬಿಲಾಲ, ಬಟ್ಟೆಯ ನಿಶಾನಿ, ಮಕರತೋರಣ, ಸತ್ತಿಗೆ, ಜಾಲರಿಕೊಡೆ, ಬೆಳ್ಳಿಯ ಪಂಚ ದೀವಟಿಕೆಗಳು ಉತ್ಸವಕ್ಕೆ ಹೆಚ್ಚಿನ ಮೆರುಗನ್ನು ನೀಡಿತು. ವಿಶೇಷ ಬಿರುದಾವಳಿಗಳನ್ನು ಶ್ರೀ ದೇವರ ಚೌತಿ, ಪಂಚಮಿ ಮತ್ತು ಷಷ್ಠಿ ಉತ್ಸವದ ಸಂದರ್ಭ ಮಾತ್ರ ಬಳಸುವುದು ವಿಶೇಷ. ಸಹಸ್ರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಸಹೋದರರ ಸಮಾಗಮ:
ಹೂವಿನ ತೇರಿನಲ್ಲಿ ಸುಬ್ರಹ್ಮಣ್ಯ ದೇವರು ಸಹೋದರ ಕಾಶಿಕಟ್ಟೆ ಮಹಾಗಣಪತಿಯ ಸನ್ನಿಧಿಗೆ ಆಗಮಿಸಿದರು. ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಹೂ ಮತ್ತು ಹಣತೆಗಳ ಶೃಂಗಾರದ ನಡುವೆ ಮಹಾಗಣಪತಿಗೆ ರಂಗಪೂಜೆ ನೆರವೇರಿತು. ಬಳಿಕ ವಾಸುಕಿ ಛತ್ರದ ಕಟ್ಟೆಯಲ್ಲಿ ಕಟ್ಟೆಪೂಜೆ, ಶಿವರಾತ್ರಿ ಕಟ್ಟೆಯಲ್ಲಿ ಮತ್ತು ಸವಾರಿ ಮಂಟಪದ ಸವಾರಿಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿಜಿಎಸ್‌ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಕಿಶೋರ್ ಕೂಜುಗೋಡು, ಚಂದ್ರಶೇಖರ ಮರ್ದಾಳ, ಚಂದ್ರಶೇಖರ ನಲ್ಲೂರಾಯ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯ ಕುಮಾರ್ ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.