ತೊಡಿಕಾನ : ಎರುಕಡಪುನಲ್ಲಿ ಸಂಪರ್ಕ ಸೇತುವೆಗೆ ಶಿಲಾನ್ಯಾಸ ಕಾರ್ಯಕ್ರಮ

0

ತೊಡಿಕಾನ ಗ್ರಾಮದ ಕಾಡುಪಂಜ – ಊರುಪಂಜ ಸಂಪರ್ಕ ಸೇತುವೆಗೆ ಎರುಕಡಪುನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಡಿ. 5ರಂದು ನಡೆಯಿತು.
ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ರವರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಬಹುದಿನಗಳ ಬೇಡಿಕೆ ಹಾಗೂ ಈ ಭಾಗದ ಕನಸು ಈಡೇರಿದಂತಾಗಿದೆ. ಇಂತಹ ದ್ವೀಪ ದಂತಹ ಊರುಗಳಿಗೆ ಸಂಪರ್ಕ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಹಿಂದೆಯೂ ನಾವು ಬೇಕಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಅನುದಾನದ ಕೊರತೆಯಿಂದಾಗಿ ಕಾಮಗಾರಿಗೆ ಚಾಲನೆ ದೊರೆತಿರಲಿಲ್ಲ. ಈ ಭಾಗದ ಜನರಿಗೆ ನಾವು ಹಂತ ಹಂತವಾಗಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಕಾಂಕ್ರೀಟೀಕರಣ ಮತ್ತು ಗಟ್ಟಿ ನೆಲ ಇರುವಲ್ಲಿ ಡಾಮರೀಕರಣವನ್ನು ಒದಗಿಸಿ ಕೊಡುವ ಭರವಸೆ ನೀಡಿದರು. ಅಲ್ಲದೆ ಕಾಡು ಪಂಜದ ಧರ್ಮದ ಚಾವಡಿಗೆ ತಡೆಗೋಡೆಯನ್ನು ಕೂಡ ತಕ್ಷಣ ಒದಗಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರನ್ನು ಕಾಡುಪಂಜ, ಊರುಪಂಜ ಕುಟುಂಬಸ್ಥರ ಪರವಾಗಿ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ನಿತ್ಯಾನಂದ ಕುಕ್ಕುಂಬಳ, ಗ್ರಾಮ ಪಂಚಾಯತ್ ಸದಸ್ಯ ವೆಂಕಟರಮಣ ಪೆತ್ತಾಜೆ, ಕೇಶವ ಅಡ್ತಲೆ, ಶ್ರೀಮತಿ ಉಷಾ, ಕಾಡುಪಂಜ ದೇವಸ್ಥಾನದ ಅಧ್ಯಕ್ಷ ಕೆ. ಪ್ರಭಾಕರ, ಸೀತಾರಾಮ ಕಾಡುಪಂಜ ಉಪಸ್ಥಿತರಿದ್ದರು. ಮನೋಜ್ ಕೆ. ಎಸ್. ಸ್ವಾಗತಿಸಿ, ನಾಗೇಶ್ ಕಾಡುಪಂಜ ವಂದಿಸಿದರು.