ಅಡಿಕೆ ಎಲೆ ಹಳದಿ ರೋಗ – ಎಲೆ ಚುಕ್ಕಿ ರೋಗ ಪರಿಹಾರಕ್ಕಾಗಿ ಡಾ.ವೀರೇಂದ್ರ ಹೆಗ್ಗಡೆಯವರ ಮೂಲಕ ಸರಕಾರಕ್ಕೆ ಮನವಿಗೆ ಪಕ್ಷಾತೀತ ನಿರ್ಧಾರ, ಎಕರೆಗೆ 5 ಲಕ್ಷ ರೂ ಪರಿಹಾರ – ಕೃಷಿಕರ ಸಾಲವನ್ನು 10 ವರ್ಷ ಬಡ್ಡಿರಹಿತವಾಗಿ ಮುಂದೂಡಲು ಮನವಿ

0

ಅಡಿಕೆ ಎಲೆ ಹಳದಿ ರೋಗ ಹಾಗೂ ಎಲೆ ಚುಕ್ಕೆ ರೋಗಕ್ಕೆ ಕೃಷಿಕರಿಗೆ ಪರಿಹಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯರಾಗಿರುವ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಳ್ಳಲು ಸುಳ್ಯದಲ್ಲಿ ಪಕ್ಷಾತೀತವಾಗಿ ನಿರ್ಧರಿಸಲಾಗಿದ್ದು, ಎರಕೆ 1 ಕ್ಕೆ ರೂ.5 ಲಕ್ಷ ಹಾಗೂ ಕೃಷಿಕರ ಸಾಲವನ್ನು 10 ವರ್ಷ ಬಡ್ಡಿ ರಹಿತವಾಗಿ ಮುಂದೂಡುವಂತೆ ಸರಕಾರದ ಜತೆ ಕೇಳಿಕೊಳ್ಳಲು ನಿರ್ಧರಿಸಲಾಗಿದೆ.

ಈ ಕುರಿತು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ನೇತೃತ್ವದಲ್ಲಿ ಪಕ್ಷಾತೀತವಾಗಿ ಸಮಿತಿಯನ್ನು ರಚಿಸಿಕೊಂಡಿರುವ ಕೃಷಿಕರಾದ ಎನ್.ಎ.ರಾಮಚಂದ್ರ, ಎಂ.ವೆಂಕಪ್ಪ ಗೌಡ, ದಿನೇಶ್ ಮಡಪ್ಪಾಡಿ, ದೀಪಕ್ ಕುತ್ತಮೊಟ್ಟೆ, ಭವಾನಿಶಂಕರ್ ಅಡ್ತಲೆಯವರು ತಾವು ರೂಪಿಸಿಕೊಂಡ ಯೋಜನೆಯ ಕುರಿತು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭವಾನಿಶಂಕರ್ ಅಡ್ತಲೆಯವರು, “ಸಂಪಾಜೆ ಯಲ್ಲಿ ಕಾಣಿಸಿಕೊಂಡ ಅಡಿಕೆ ಎಲೆ ಹಳದಿ ರೋಗ ಇದೀಗ ಅರಂತೋಡು, ತೊಡಿಕಾನವಾಗಿ ತಾಲೂಕಿನ ಹಲವು ಗ್ರಾಮಗಳಿಗೆ ಹಬ್ಬಿದೆ. ಅಡಿಕೆ ಇಲ್ಲಿಯ ಜನರ ಮುಖ್ಯ ಆದಾಯ. ಇದೀಗ ಆ ಮುಖ್ಯ ಕೃಷಿಗೆ ಏಟು ಬಿದ್ದಿರುವುದರಿಂದ ಕೃಷಿಕರ ಬದುಕು ಕೂಡಾ ತೊಂದರೆಗೆ ಸಿಲುಕಿದೆ. ಕೃಷಿ, ಮನೆ, ಶಿಕ್ಷಣಕ್ಕಾಗಿ ಸಾಲ ಮಾಡಲಾಗಿದ್ದು ಅದನ್ನು ಕಟ್ಟಲಾಗದೆ ಕೃಷಿಕರಾದ ನಾವು ಅತಂತ್ರತೆಗೆ ಸಿಲುಕಿದ್ದೇವೆ. ಇದುವರೆಗೆ ಆತ್ಮಹತ್ಯೆ ಯ ಪರಿಸ್ಥಿತಿ ಬಂದಿಲ್ಲವಾದರೂ ಮುಂದೆ ಅದೂ ಆಗಲು ಬಹುದು. ಅಡಿಕೆ ಎಲೆ ಹಳದಿ ರೋಗದ ಪರಿಹಾರಕ್ಕಾಗಿ ಕೃಷಿಕರ ಸಂವಾದಗಳು ತಾಲೂಕಿನ ಹಲವು ಕಡೆ ನಡೆದಿದೆ.‌ ಸರಕಾರಕ್ಕೆ ಮನವಿಗಳು ಹಲವು ಬಾರಿ ಮಾಡಲಾಗಿದೆ. ಆದರೆ ಯಾವುದು ಪರಿಹಾರ ಕಂಡಿಲ್ಲ. ಅದಕ್ಕಾಗಿ ಇಂದು ಪಕ್ಷಾತೀತವಾಗಿ ಕೃಷಿಕರ ಪರ ಸಮಿತಿಯನ್ನು ಮಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ಡಿ.ವೀರೇಂದ್ರ ಹೆಗ್ಗಡೆಯವರನ್ನು ಕಂಡು ಕೃಷಿಕರ ಕಷ್ಟದ ಕುರಿತು ಅಹವಾಲು ಹೇಳಿಕೊಂಡಿದ್ದೇವೆ. ಅವರು ಸಹಕಾರದ ಭರವಸೆ ನೀಡಿದ್ದು ಅವರ ಮುಂದಾಳತ್ವದಲ್ಲಿ ಸರಕಾರಕ್ಕೆ ಮನವಿ ಮಾಡಿ ಹಳದಿ ರೋಗ ಬಂದಿರುವ ಅಡಿಕೆ ಕೃಷಿಯ ತೋಟಕ್ಕೆ ಎಕರೆ ಯೊಂದಕ್ಕೆ ರೂ.5 ಲಕ್ಷ ಪರಿಹಾರ ಹಾಗೂ ಈಗ ಮಾಡಿರುವ ಸಾಲವನ್ನು‌ ಕನಿಷ್ಠ 10 ವರ್ಷ ಮುಂದೂಡಬೇಕೆಂದು ಕೇಳಿಕೊಳ್ಳಲಾಗುವುದು ಎಂದು ಹೇಳಿದರು.
ಸರಕಾರ ರೂ.25 ಕೋಟಿ ಸಂಶೋಧನೆಗೆ ಎಂದು ನೀಡಿದೆ. ಆದರೆ ಅದು ಏನಾಯ್ತೆಂಬ ಮಾಹಿತಿ ಇಲ್ಲ. ಸಂಶೋಧನೆ ಗಳ ಕುರಿತು ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅಡಿಕೆಗೆ ಪರ್ಯಾಯವಾಗಿ ಯಾವ ಬೆಳೆ ಬೆಳೆದರೂ ಬದುಕು ನಡೆಸಲು ಸಾಕಾಗಬುದೇ ಹೊರತು ಸಾಲ ಕಟ್ಟಲು ಸಾಧ್ಯವಿಲ್ಲ” ಎಂದವರು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ ಮಾತನಾಡಿ “ಖಾವಂದರ ಮೂಲಕ ಸರಕಾರಕ್ಕೆ ಕೃಷಿಕರ ಪರವಾದ ಮನವಿ ಮಾಡಿಕೊಳ್ಳಲಾಗುವುದು. ಮುಂದಿನ ಫೆಬ್ರವರಿಯಲ್ಲಿ ಸುಳ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸಭೆ ಮಾಡಿ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ. ಅದಕ್ಕೂ ಮೊದಲು ಗ್ರಾಮ ಗ್ರಾಮದಲ್ಲಿ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.

ನ್ಯಾಯವಾದಿ ಎಂ.ವೆಂಕಪ್ಪ ಗೌಡರು ಮಾತನಾಡಿ ಇದು ಯಾವುದೇ ಸರಕಾರದ ವಿರುದ್ಧದ ಕಾರ್ಯ ಯೋಜನೆ ಅಲ್ಲ. ಕೃಷಿಕರ ಪರ ಪಕ್ಷಾತೀತವಾಗಿ ಒಟ್ಟಾಗಿ ಸರಕಾರವನ್ನು ಒತ್ತಾಯಿಸುತ್ತೇವೆ. ಸರಕಾರದ ವತಿಯಿಂದ ಹಳದಿ ರೋಗದ ಸಂಶೋಧನೆ ನಡೆಯುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಅದು ನಡೆಯಲಿ. ಅಲ್ಲಿಯ ತನಕ ಕೃಷಿಕರು ಏನು ಮಾಡಬೇಕು. ಅದಕ್ಕಾಗಿ ನಮ್ಮ ಒತ್ತಾಯ. 10 ವರ್ಷ ಸಹಕಾರ ಸಂಘದಲ್ಲಿರುವ ನಮ್ಮ ಸಾಲವನ್ನು ಬಡ್ಡಿ ರಹಿತವಾಗಿ ಮುಂದೂಡಿದ ಸಂದರ್ಭದಲ್ಲಿ ಸಹಕಾರಿ ಸಂಘದ ಬಡ್ಡಿಯನ್ನು ಸರಕಾರ ಪಾವತಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ. ಇದು ಕೃಷಿಕರ ಬದುಕಿಗಾಗಿ ಹೋರಾಟ” ಎಂದರು.

ನ್ಯಾಯವಾದಿ ದೀಪಕ್ ಕುತ್ತಮೊಟ್ಟೆ ಮಾತನಾಡಿ ಸರಕಾರದ ಗಮನ ಸೆಳೆಯುವ ಮೂಲಕ ಕೃಷಿಕರ ಬದುಕು ಮತ್ತೆ ಚಿಗುರಬೇಕಾಗಿದೆ. ಸಂಶೋಧನೆಗಳು ಸಮರ್ಪಕವಾಗಿ ನಡೆಯಬೇಕು ಎಂದು ಅವರು ಹೇಳಿದರು.

ನ್ಯಾಯವಾದಿ ದಿನೇಶ್ ಮಡಪ್ಪಾಡಿ ಮಾತನಾಡಿ ಅಡಿಕೆಯನ್ನೇ ಇಲ್ಲಿಯ ಜನರು ನಂಬಿಕೊಂಡಿದ್ದಾರೆ.‌ ಅದೇ ಇಲ್ಲವಾದರೆ ಮುಂದೆ ಆರ್ಥಿಕ ವಾಗಿ, ಸಾಮಾಜಿಕವಾಗಿ ತುಂಬಾ ತೊಂದರೆ ಎದುರಾಗುವುದು.‌ ಅದಕ್ಕಾಗಿ ನಾವು ಡಾ.ವೀರೇಂದ್ರ ಹೆಗ್ಗಡೆಯವರ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ” ಎಂದು ಹೇಳಿದರು.

ಯೋಜನಾಧಿಕಾರಿ ನಾಗೇಶ್ ಪಿ ಪತ್ರಿಕಾಗೋಷ್ಠಿಯಲ್ಲಿದ್ದರು.