ಪಿ.ಕೆ.ಅಬೂಸಾಲಿಯವರ ಸತ್ಯ ಪ್ರಮಾಣದ ಸವಾಲನ್ನು ಸ್ವೀಕರಿಸುತ್ತೇವೆ, ಅವರು ಕರೆದಲ್ಲಿಗೆ ಬರಲು ಸಿದ್ದ, ನನ್ನ ಮೇಲಿನ ಆರೋಪಕ್ಕೆ ಸಾಕ್ಷ್ಯ ಒದಗಿಸಲಿ, ಯಾರೋ ಬರೆದುಕೊಟ್ಟದ್ದನ್ನು ಓದಬೇಡಿ : ಶೌವಾದ್ ಗೂನಡ್ಕ

0

ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಪಿ.ಕೆ.ಅಬೂಸಾಲಿಯವರು ನಮ್ಮ ಮೇಲೆ ಸತ್ಯ ಪ್ರಮಾಣದ ಸವಾಲನ್ನು ಹಾಕಿದ್ದು, ಇದನ್ನು ನಾವು ಸ್ವೀಕರಿಸಿದ್ದೇವೆ, ಅವರು ಕರೆದಲ್ಲಿಗೆ ಬರಲು ಸಿದ್ದ, ಯಾರು ಬಿ.ಜೆ.ಪಿ.ಗೆ ಪ್ರಚಾರ ಮಾಡಿದ್ದಾರೆಂದು ಸಾಬೀತಾಗಲಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಮಿಥುನ್ ರೈಯವರ ವಿರುದ್ಧ ಕೆಲಸ ಮಾಡಿದ್ದೇನೆ ಎಂಬುವುದಕ್ಕೆ ತಕ್ಷಣವೇ ಸಾಕ್ಷ್ಯ ಒದಗಿಸಲಿ, ಇಲ್ಲದಿದ್ದಲ್ಲಿ ಅಬೂಸಾಲಿಯವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಶೌವಾದ್ ಗೂನಡ್ಕರವರು ತಿಳಿಸಿದ್ದಾರೆ.

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರು ನ್ಯಾಯ ಸಮ್ಮತ ತೀರ್ಮಾನ ಕೈಗೊಂಡಿಲ್ಲವೆಂದು ಅವರ ತೇಜೋವಧೆಗೆ ಪ್ರಯತ್ನಿಸುತ್ತಿರುವ ಅಬೂಸಾಲಿಯವರೇ ತಾವು ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು, 2021 ರ ಫೆಬ್ರವರಿಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ನ ಎಲ್ಲಾ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸೋಮಶೇಖರ್ ಕೊಯಿಂಗಾಜೆಯವರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪರಮಾಧಿಕಾರ ಕೊಟ್ಟೆವು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ನಾಲ್ವರು ಆಕಾಂಕ್ಷಿಗಳು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದ ಕಾರಣ ಸೋಮಶೇಖರ್ ಕೊಯಿಂಗಾಜೆಯವರು ಅದನ್ನು ಗ್ರಾಮದ ಅಲ್ಪಸಂಖ್ಯಾತ ಮುಖಂಡರ ತೀರ್ಮಾನಕ್ಕೆ ಬಿಟ್ಟು ಅವರ ಶಿಫಾರಸ್ಸಿನಂತೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತೇನೆಂದು ತಿಳಿಸಿದರು, ಅದರಂತೆ ಸಂಪಾಜೆಯ ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರು ಮಾಡಿದ ಶಿಫಾರಸ್ಸಿನ ಪ್ರಕಾರ ಜಿ.ಕೆ.ಹಮೀದ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ, ಆದರೆ ಅವರು ಪಕ್ಷದ ಒಪ್ಪಂದ ಪ್ರಕಾರ ರಾಜೀನಾಮೆ ನೀಡದೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಗ್ರಾಮ ಪಂಚಾಯತ್ ಸದಸ್ಯರುಗಳ ಬೆಂಬಲವಿದೆ ಎಂದು ಹೇಳುವ ಜಿ.ಕೆ.ಹಮೀದ್ ಅವರಿಗೆ ಅಬೂಸಾಲಿಯವರ ಮೇಲೆ ಅಷ್ಟು ಪ್ರೀತಿ, ಗೌರವ ಇದ್ದರೆ ರಾಜೀನಾಮೆ ನೀಡಿ ಅಬೂಸಾಲಿಯವರನ್ನು ಗ್ರಾಮ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಲಿ, ಅದು ಬಿಟ್ಟು ಅಬೂಸಾಲಿಯವರು ಸೋಮಶೇಖರ್ ಕೊಯಿಂಗಾಜೆಯವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಿಲ್ಲವೆಂದು ಅವರು ತಿಳಿಸಿದರು. ಯಾರೋ ಬರೆದುಕೊಟ್ಚದ್ದನ್ನು ಪತ್ರಿಕಾಗೋಷ್ಠಿಯಲ್ಲಿ ಒದುವ ಅಬೂಸಾಲಿಯವರೇ ತಾವು ರಾಜಕೀಯವನ್ನು ಮಾಡಿ ಅದು ಬಿಟ್ಟು ವೈಯಕ್ತಿಕ ರಾಜಕೀಯವನ್ನು ಮಾಡಬೇಡಿ ಎಂದವರು ಹೇಳಿದರು.

ಕುಟುಂಬ ರಾಜಕಾರಣದ ಹೆಸರಿನಲ್ಲಿ ನನ್ನನ್ನು ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ, ರಾಜಕೀಯ ನನ್ನ ಆಸಕ್ತಿದಾಯಕ ಕ್ಷೇತ್ರ, ಆದುದ್ದರಿಂದ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದರೂ ಉದ್ಯೋಗಕ್ಕೆ ಹೋಗದೆ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೀನೆ. ರಾಜಕೀಯ ನನ್ನ ಸ್ವಂತ ಲಾಭಕ್ಕೆ ಮಾಡುತ್ತಿಲ್ಲ, ಗ್ರಾಮದಲ್ಲಿ ಕೆಲವರು ರಾಜಕೀಯವನ್ನು ಉದ್ಯೋಗವನ್ನಾಗಿ ಮಾಡಿಕೊಂಡು ಕಮೀಶನ್ ದಂಧೆಯನ್ನು ಮಾಡುತ್ತಿದ್ದಾರೆ, ಇದರ ಎಲ್ಲಾ ದಾಖಲೆಗಳು ನನ್ನಲ್ಲಿದ್ದು, ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕಾನೂನು ಹೋರಾಟವನ್ನು ಮಾಡಲಾಗುವುದು ಎಂದು ಶೌವಾದ್ ಗೂನಡ್ಕ ತಿಳಿಸಿದ್ದಾರೆ.