ವಿದ್ಯಾರ್ಥಿಗಳ ನಡುವೆ ಜಾತಿ ನಿಂದನೆ ಮತ್ತು ಹಲ್ಲೆ ಆರೋಪ : ಇತ್ತಂಡಗಳಿಂದ ಸುಳ್ಯ ಪೊಲೀಸ್ ದೂರು

0

ಸುಳ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯೋರ್ವರಿಗೆ ಅದೇ ಕಾಲೇಜಿನ ಸೀನಿಯರ್ ವಿಭಾಗದ ವಿದ್ಯಾರ್ಥಿಗಳು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು ವಿದ್ಯಾರ್ಥಿನಿ ಪೊಲೀಸ್ ದೂರು ನೀಡಿದ್ದಾರೆ. ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಗಳು ಕೂಡಾ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರತಿದೂರು ನೀಡಿದ್ದಾರೆ.

ಬೆಂಗಳೂರು ಮೂಲದ ವಿದ್ಯಾರ್ಥಿನಿ ಡಾ. ಪಲ್ಲವಿ ಎಂಬವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿ ‘ಕಳೆದ ಆರು ತಿಂಗಳಿನಿಂದ ನಾನು ಕಲಿಯುತ್ತಿರುವ ಕಾಲೇಜಿನ ಸಹಪಾಠಿ ವೈದ್ಯರುಗಳಾದ ವಿಶಾಕ್, ಐಶ್ವರ್ಯ ಆರ್, ಅಲ್ಫಮೇರಿ ಮ್ಯಾಥ್ಯೂ , ಡೆನಲ್ ಸಭಾ ಸ್ಟೀಲ್, ರಿಷಿಕೇಶ್, ದಯಾ ಆನ್ ವರ್ಗೀಸ್ ಮತ್ತು ಇತರರು ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಡಿಸೆಂಬರ್ 21ರಂದು ನನ್ನ ಅಣ್ಣ ವಿಜಯ್ ಮತ್ತು ಸಹಪಾಠಿಯೋರ್ವರೊಂದಿಗೆ ಸುಳ್ಯದ ಹೋಟೆಲ್ ಒಂದರಲ್ಲಿ ರಾತ್ರಿ ಊಟ ಮುಗಿಸಿ ರೂಮಿಗೆ ಬಂದು ನಮ್ಮೊಂದಿಗಿದ್ದ ಸಹಪಾಠಿಯನ್ನು ಅವರ ರೂಮಿಗೆ ಬಿಡಲೆಂದು ಹೋಗುತ್ತಿದ್ದ ಸಂದರ್ಭ ನಮ್ಮನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಇದೇ ಘಟನೆಗೆ ಸಂಬಂಧಿಸಿದಂತೆ ಡಾ. ವಿಶಾಕ್ ಪಣಿಕ್ಕರ್ ಕೂಡಾ ಪೊಲೀಸ್ ದೂರು ನೀಡಿದ್ದು, ಡಾ. ಪಲ್ಲವಿ, ಡಾ. ಹನೀಶ್, ಪಲ್ಲವಿ ಅಣ್ಣ ಮತ್ತು ಇನ್ನೋರ್ವ ಅಪರಿಚಿತ ವ್ಯಕ್ತಿಯ ಮೇಲೆ ದೂರು ನೀಡಿದ್ದಾರೆ. ಡಿಸೆಂಬರ್ 21ರಂದು ರಾತ್ರಿ 10.30 ಕ್ಕೆ ನನ್ನ ಸ್ನೇಹಿತನನ್ನು ಆತ ಇರುವ ಪೀಜಿ ಕಡೆಗೆ ಡ್ರಾಪ್ ಮಾಡಲು ಹೋಗುತ್ತಿದ್ದಾಗ ಕೆವಿಜಿ ಐಪಿಎಸ್ ಸ್ಕೂಲ್ ನ ಹತ್ತಿರ ಇನ್ನೋವಾ ಕಾರೊಂದು ಬೆನ್ನಟ್ಟಿ ಬಂದು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾಕ್ ಲಿವರ್ನಿಂದ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ವೈದ್ಯರುಗಳಾದ ಪಲ್ಲವಿ, ಅನೀಶ್, ಪಲ್ಲವಿ ರವರ ಅಣ್ಣ, ಹಾಗೂ ಅಪರಿಚಿತ ವ್ಯಕ್ತಿ ಓರ್ವರು ಇದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತಂಡದ ದೂರು ಸ್ವೀಕರಿಸಿರುವ ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.