ಫೆಬ್ರವರಿಯಲ್ಲಿ ಕಡಬ, ಸುಬ್ರಹ್ಮಣ್ಯಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಕಾಮಗಾರಿಗೆ ಚಾಲನೆ
: ಸಚಿವ ಎಸ್.ಅಂಗಾರ

ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಲು ಹಾಗೂ ಉದ್ಘಾಟನೆ ನೆರವೇರಿಸಲು ರಾಜ್ಯದ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಫೆಬ್ರವರಿ ತಿಂಗಳ 28ರ ಮೊದಲು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಡಬಕ್ಕೆ ಆಗಮಿಸಲಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಸುಬ್ರಹ್ಮಣ್ಯದಲ್ಲಿ ಜ.16 ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 300 ಕೋಟಿ ವೆಚ್ಚದ ಮಾಸ್ಟರ್ ಪ್ಲಾನ್ ಕಾಮಗಾರಿಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಫೆಬ್ರವರಿ 28ರಂದು ಅಥವಾ ಅದಕ್ಕಿಂತ ಮೊದಲು ಸಿಎಂ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಡಬ ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ಕಡಬ ತಾಲೂಕು ಪಂಚಾಯತ್ ಕಟ್ಟಡ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಿನಿ ವಿಧಾನ ಸೌಧ, ಪಶುಪಾಲನಾ ಇಲಾಖೆಯ ಡಿಪ್ಲೊಮಾ ಕಾಲೇಜು ಇವುಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಅವರು ದಿನಾಂಕ ನಿಗಧಿ ಮಾಡಿದ ಕೂಡಲೇ ಪೂರ್ವಭಾವಿ ಸಭೆ, ಸಿದ್ಧತೆಗಳನ್ನು ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಆರೋಗ್ಯಕ್ಕೆ ಆದ್ಯತೆ:
ಸುಬ್ರಹ್ಮಣ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗಾಗಲೇ ಐಸಿಯು, ವೆಂಟಿಲೇಟರ್ ಒದಗಿಸಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು. ಆರೋಗ್ಯ ಹಿತದೃಷ್ಟಿಯಿಂದ ಯಾವ ಪ್ರಯತ್ನ ಮಾಡಬೇಕೋ ಅದನ್ನು ಮಾಡಲಾಗುವುದು. ಸುಬ್ರಹ್ಮಣ್ಯ ಸೇರಿದಂತೆ ಎಲ್ಲಾ ಆಸ್ಪತ್ರೆಗೆ 24 ಗಂಟೆಯೂ ವೈದ್ಯರು ಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಸರಕಾರ ಗಮನ ನೀಡಿದೆ. ಒಂದಷ್ಟು ವೈದ್ಯರ ನೇಮಕಾತಿಯೂ ಆಗುತ್ತಿದೆ. ಎಲ್ಲಾ ಕಡೆ ವೈದ್ಯರ ನೇಮಕಾತಿಯಾದಲ್ಲಿ ಸಮಸ್ಯೆ ಬರುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.