ಕಾಡಾನೆ ತಡೆಗೆ ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್

0

42 ಲಕ್ಷ ರೂ ವೆಚ್ಚದಲ್ಲಿ7 ಕಿ.ಮೀ. ಕಾಮಗಾರಿ ಪ್ರಗತಿ : ತಾಲೂಕಿನಲ್ಲಿ ಪ್ರಥಮ ಪ್ರಯೋಗ


ಕಾಡಾನೆಗಳು ನಾಡಿಗೆ ಬರುವುದನ್ನು ತಡೆಯಲು ಸುಳ್ಯ ಹಾಗೂ ಸುಬ್ರಹ್ಮಣ್ಯ ವಲಯ ವ್ಯಾಪ್ತಿಯಲ್ಲಿ ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್ ಕಾಮಗಾರಿಯನ್ನು ಮಾಡಲಾಗುತ್ತಿದ್ದು, ರೂ. ೪೨ ಲಕ್ಷ ವೆಚ್ಚದಲ್ಲಿ ೭ ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಇದು ತಾಲೂಕಿನಲ್ಲೇ ಪ್ರಥಮ ಪ್ರಯೋಗವಾಗಿದೆ.


ತಾಲೂಕಿನ ಸುಳ್ಯ ಮತ್ತು ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಪ್ರಯೋಗವನ್ನು ಅಳವಡಿಸಲಾಗುತ್ತಿದೆ. ತಾಲೂಕಿಗೆ ಒಟ್ಟು ೭ ಕಿ.ಮೀ. ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್ ಯೋಜನೆ ಸರಕಾರದಿಂದ ಮಂಜೂರುಗೊಂಡಿದ್ದು ಸುಳ್ಯ ವಲಯದಲ್ಲಿ ೬ ಕಿ.ಮೀ. ಹಾಗೂ ಸುಬ್ರಹ್ಮಣ್ಯ ವಲಯದಲ್ಲಿ ೧ ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ೧ ಕಿ.ಮೀ. ಕಾಮಗಾರಿ ನಡೆಸಲು ರೂ.೬ ಲಕ್ಷ ವೆಚ್ಚ ಸರಕಾರ ನೀಡುತ್ತಿದೆ.
ಆನೆಗಳ ಹಿಂಡು ಅತೀ ಹೆಚ್ಚು ಧಾಳಿ ಇಡುವ ಅಜ್ಜಾವರ ಗ್ರಾಮದ ಅಡ್ಪಂಗಾಯ, ಕರ್ಲಪ್ಪಾಡಿ, ಪಡ್ಡಂಬೈಲು, ನಾಂಗುಳಿ ಈ ಭಾಗದಲ್ಲಿ ೫ ಕಿ.ಮೀ. ಹಾಗೂ ತುದಿಯಡ್ಕ – ಪೊಡುಂಬ ಭಾಗದಲ್ಲಿ ೧ ಕಿ.ಮೀ. ಹಾಗೂ ಸುಬ್ರಹ್ಮಣ್ಯ ವಲಯದಲ್ಲಿ ಕೊಲ್ಲಮೊಗ್ರದ ಇಡ್ನೂರು ಭಾಗದಲ್ಲಿ ೧ ಕಿ.ಮೀ. ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್ ಮಾಡಲಾಗುತ್ತಿದೆ.
೧೪ ಫೀಟ್ ಉದ್ದದ ಕಬ್ಬಿಣದ ಕಂಬಗಳನ್ನು ೨೫ ಫೀಟ್ ಅಂತರದಲ್ಲಿ ಅಳವಡಿಸಲಾಗುವುದು. ಮೇಲೆ ೬ ಅಡಿ ಅಗಲವಿರುತ್ತದೆ. ಅಲ್ಲಿಂದ ತಂತಿಗಳನ್ನು ಇಳಿಸಲಾಗುವುದು. ಪ್ರತೀ ೨ ಕಿ.ಮೀ. ಅಂತರಕ್ಕೆ ಸೋಲಾರ್ ಪೆನಲ್, ಬ್ಯಾಟರಿಗಳನ್ನು ಹಾಕಲಾಗುವುದು

. ಆನೆಗಳು ಕಾಡಿನಿಂದ ಬಂದು ತೋಟಗಳಿಗೆ ಪ್ರವೇಶಿಸುವ ಮೀಸಲು ಅರಣ್ಯ ಪ್ರದೇಶದ ಗಡಿಗಳಲ್ಲಿ ಈ ಯೋಜನೆಯ ಕಾಮಗಾರಿ ಮಾಡಲಾಗುತಿದೆ. ಆನೆಗಳು ಸೋಲಾರ್ ಬೇಲಿಯನ್ನು ಟಚ್ ಮಾಡಿದಾಗ ಅದಕ್ಕೆ ಶಾಕ್ ಹೊಡೆಯುತ್ತದೆ. ಆನೆಗಳು ಮತ್ತೆ ಆ ಭಾಗದಲ್ಲಿ ಬರುವುದಿಲ್ಲವೆಂಬ ಚಿಂತನೆ ಇಲಾಖೆಯದ್ದು.
ಸೊಲಾರ್ ಹಾಕಿ ಎರಡು ವರ್ಷದ ವರೆಗೆ ಗುತ್ತಿಗೆ ವಹಿಸಿಕೊಂಡ ಕಂಪೆನಿಯವರು ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್ ನ ಮೈಂಟೆನೆನ್ಸ್ ಮಾಡುವರು.


ಜೇನು ಪೆಟ್ಟಿಗೆ ಪ್ರಯೋಗದ ನಂತರ
ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್
ಕಾಡಾನೆಗಳು ತೋಟಕ್ಕೆ ಬಾರದಂತೆ ತಡೆಯಲು ಎರಡು ವಾರದ ಹಿಂದೆ ಮಂಡೆಕೋಲು ಗ್ರಾಮದ ದೇವರಗುಂಡ ಭಾಗದಲ್ಲಿ ಜೇನು ಪೆಟ್ಟಿಗೆ ಪ್ರಯೋಗವನ್ನು ಮಾಡಲಾಗಿದೆ. ಆನೆಗಳು ತೋಟಕ್ಕೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಅದರ ಶಬ್ದಕ್ಕೆ ಆನೆಗಳು ಬರುವುದಿಲ್ಲವೆಂಬ ಕಾರಣವನ್ನು ಅಧಿಕಾರಿಗಳು ಹೇಳುತ್ತಾರೆ.
ಆದರೆ ದೇವರಗುಂಡದಲ್ಲಿ ಜೇನು ಪೆಟ್ಟಿಗೆ ಇಟ್ಟ ದಾರಿಯದ ಬದಿಯಲ್ಲೇ ಆನೆಗಳು ಬಂದು ಹೋಗಿವೆ. ಅಲ್ಲೇ ಇನ್ನೊಂದು ಕಡೆಯಲ್ಲಿ ಆನೆಗಳು ಮರವೊಂದನ್ನು ಮುರಿಯುವಾಗ ಅದು ಜೇನು ಪೆಟ್ಟಿಗೆಗೆ ಬಿದ್ದಿದೆ. ಜೇನು ಪೆಟ್ಟಿಗೆ ಇಟ್ಟಲ್ಲಿ ಆನೆಗಳು ಬಂದಿಲ್ಲ.
`’ನಾವು ಆನೆಗಳು ಬರುವ ದಾರಿಯಲ್ಲಿ ಜೇನು ಪೆಟ್ಟಿಗೆ ಇಟ್ಟಿzವೆ. ಆ ದಾರಿಯಲ್ಲಿ ಬಂದಿಲ್ಲ. ಆದರೆ ಬದಲಿ ರಸ್ತೆಗಳನ್ನು ಮಾಡಿಕೊಂಡು ಆನೆಗಳು ತೋಟಕ್ಕೆ ಬಂದಿದೆ. ಪೆಟ್ಟಿಗೆ ಇಟ್ಟಲ್ಲಿ ಆನೆಗಳು ಬಾರದಿರುವುದರಿಂದ ಈ ಪ್ರಯೋಗ ಎಫೆಕ್ಟಿವ್ ಎಂದು ಅನಿಸುತ್ತದೆ ತೋಟದಲ್ಲಿ ಪೆಟ್ಟಿ ಇರಿಸಿರುವ ಬಾಲಚಂದ್ರ ದೇವರಗುಂಡ ಹೇಳಿದ್ದಾರೆ.
ಸೋಲಾರ್ ಬೇಲಿ ಯಾರೂ ಮುಟ್ಟುವಂತಿಲ್ಲ
ಆನೆಗಳು ಬಾರದಂತೆ ತಡೆಯಲು ಸೋಲಾರ್ ಬೇಲಿಯನ್ನು ಹಾಕಲಾಗುತ್ತಿದೆ. ಇದನ್ನು ಯಾರೂ ಮುಟ್ಟುವಂತಿಲ್ಲ. ಆನೆಗಳು ಟಚ್ ಮಾಡಿದಾಗ ಶಾಕ್ ಹೊಡೆಯುತ್ತದೆ. ಹಾಗೆಂದ ಮಾತ್ರಕ್ಕೆ ಜೀವಕ್ಕೆ ಹಾನಿಯಾಗುವುದಿಲ್ಲ. ಆ ಬಗ್ಗೆ ಭಯಬೇಡ. ಎಲ್ಲ ಸುರಕ್ಷತೆಯನ್ನು ಇಟ್ಟುಕೊಂಡೇ ಯೋಜನೆ ಮಾಡಲಾಗಿದೆ. ಆದರೆ ಎಚ್ಚರಿಕೆಯಿಂದ ಇರಬೇಕು. ಸೋಲಾರ್ ಬೇಲಿ ಅಳವಡಿಸುವ ಸುತ್ತಮುತ್ತ ಯಾವುದೇ ಗಿಡಗಳು ಕೂಡಾ ಅದಕ್ಕೆ ಟಚ್ ಆಗುತ್ತಿರಬಾರದು. ಅಲ್ಲಿ ಸೋಲಾರ್ ಶಕ್ತಿ ನಷ್ಟವಾಗುತ್ತದೆ. ಈ ಎಲ್ಲ ಜಾಗ್ರತೆಯನ್ನು ನೋಡಿಕೊಳ್ಳಲಾಗುತ್ತಿದೆ. ಪ್ರತೀ ಎರಡು ಕಿ.ಮೀ. ದೂರಕ್ಕೆ ಪೆನಲ್, ಬ್ಯಾಟರಿ ಹಾಕಿ ಅಲ್ಲಿ ಅದರ ಮೈಂಟೆನೆನ್ಸ್ ಸ್ವಿಚ್‌ಗಳನ್ನು ಇಡಲಾಗುತ್ತದೆ. ಸಂಜೆಯಿಂದ ಬೆಳಗಿನವರೆಗೆ ಸ್ವಿಚ್ ಹಾಕಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
೫೦ ಶೇಖಡ ಸಬ್ಸಿಡಿಯಲ್ಲಿ ಸೋಲಾರ್ ಬೇಲಿ
ಪ್ರಯೋಜನ ಪಡೆಯುವಂತೆ ವಿನಂತಿ
ಸುಳ್ಯ ವಲಯದ ಸಂಪಾಜೆ, ಆಲೆಟ್ಟಿ, ಅಜ್ಜಾವರ, ಮಂಡೆಕೋಲು ಭಾಗದಲ್ಲಿ ಆನೆಗಳು ಬರುತ್ತಿವೆ. ಹೆಚ್ಚಿನ ಕಡೆಗಳಲ್ಲಿ ಕಂದಕವನ್ನು ತೆಗೆಯಲಾಗಿದೆ. ಅದು ಸಾಕಾಗುತ್ತಿಲ್ಲ. ಅರಣ್ಯ ಪ್ರದೇಶದ ಬದಿಯಲ್ಲಿರುವ ಕೃಷಿಕರು ಸೋಲಾರ್ ಬೇಲಿ ಮಾಡಲು ಸರಕಾರ ಸಬ್ಸಿಡಿ ನಿಡುತ್ತದೆ. ಒಂದು ಕಿ.ಮೀ. ಬೇಲಿ ರಚನೆಗೆ ಒಟ್ಟು ೨ ಲಕ್ಷದ ೩೦ ಸಾವಿರ ವೆಚ್ಚ ತಗಲುವುದು. ಅದರಲ್ಲಿ ಅರ್ಧಾಂಶ ಇಲಾಖೆ ನೀಡುತ್ತದೆ. ಆಸಕ್ತ ರೈತರು ಮುಂದೆ ಬರಬೇಕು. ಈಗಾಗಲೇ ಸಂಪಾಜೆಯಲ್ಲಿ ರೈತರು ಈ ಸೌಲಭ್ಯ ಅಳವಡಿಸಿದ್ದಾರೆ ಎಂದು ಸುಳ್ಯ ರೇಂಜರ್ ತಿಳಿಸಿದ್ದಾರೆ.