ಸಂಕಷ್ಟಕ್ಕೀಡಾದ ಮಹಿಳೆಗೆ ಆಪತ್ಬಾಂಧವರಾದ ದಾನಿಗಳು

0

ಸುಳ್ಯದ ದಾನಿಗಳೊಂದಿಗೆ ಕೈಜೋಡಿಸಿದ ಕೊಡಗಿನ ಮಾಧ್ಯಮ ಸ್ಪಂದನ ಬಳಗ

ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಬಡ ಮಹಿಳೆಯೋರ್ವರು ಮಗುವಿಗೆ ಜನ್ಮನೀಡಿ ಆಸ್ಪತ್ರೆಯ ಹಣ ಭರಿಸಲು ಸಾಧ್ಯವಾಗದೆ ಸಂಕಷ್ಟಕ್ಕಿಡಾಗಿ,ಸುಳ್ಯದ ದಾನಿಗಳು ಹಾಗೂ ಕೊಡಗು ಮಾಧ್ಯಮ ಸ್ಪಂದನ ಬಳಗದವರ ಸಹಕಾರದಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಗೊಂಡು ಆಕೆಯ ಮನೆ ಸೇರಿದ ಘಟನೆ ಫೆಬ್ರವರಿ 3 ರಂದು ಸುಳ್ಯದಿಂದ ವರದಿಯಾಗಿದೆ.

ಕೊಡಗಿನ ವಿರಾಜಪೇಟೆಯ ಸಮೀಪದ ನಿವಾಸಿ ಸತೀಶ್ ಎಂಬುವವರ ಪತ್ನಿ ಸಬಿತಾ ಎಂಬುವವರು ಹೆರಿಗೆಗಾಗಿ ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ಕಳೆದ 14 ದಿನಗಳ ಮೊದಲು ಬಂದು ದಾಖಲಾಗಿದ್ದರು.

ಮೊದಲ ಎರಡು ಮಕ್ಕಳ ಹೆರಿಗೆ ಸಿಜೇರಿಯನ್ ಆಗಿದ್ದ ಕಾರಣ ಈ ಹೆರಿಗೆಯೂ ಕೂಡ ಸಿಜೇರಿಯನ್ ಮೂಲಕವೇ ನಡೆದಿತ್ತು.
ಪರಿಶಿಷ್ಟ ಪಂಗಡದ ಬಡ ಕುಟುಂಬದ ಸದಸ್ಯರಾಗಿದ್ದ ಇವರು ಖರ್ಚಿಗೆ ಬೇಕಾಗಿದ್ದ ಹಣವನ್ನು ಈಕೆಯ ಪತಿ ಸತೀಶ್ ತಮ್ಮ ಮನೆಯ ಸಮೀಪ ಬೇರೆಯವರಲ್ಲಿ ಸಾಲವಾಗಿ ಕೇಳಿದ್ದು ಇದಕ್ಕೆ ಒಪ್ಪಿಕೊಂಡಿದ್ದ ಅವರು ಹೆರಿಗೆ ಕಳೆದ ಬಳಿಕ ಹಣ ನೀಡದೆ ಸತಾಯಿಸಿದ್ದಾರೆ ಎನ್ನಲಾಗಿದೆ.

ಸಬಿತರವರೊಂದಿಗೆ ಆಸ್ಪತ್ರೆಯಲ್ಲಿ ಅವರ ಮತ್ತೆ 2 ಪುಟ್ಟ ಹೆಣ್ಣು ಮಕ್ಕಳು ಇದ್ದು ಜನರಲ್ ವಾರ್ಡಿನಲ್ಲಿ ಈ ಮಕ್ಕಳೊಂದಿಗೆ ಇರಲು ಸಾಧ್ಯವಾಗದೆ, ಗಂಡನಿಗೆ ಹೇಗೋ ಹಣದ ವ್ಯವಸ್ಥೆ ಆಗಬಹುದೆಂಬ ವಿಶ್ವಾಸದಲ್ಲಿ ಆಸ್ಪತ್ರೆಯಲ್ಲಿ ಪ್ರತ್ಯೇಕ ರೂಮನ್ನು ಪಡೆದು ಅಲ್ಲಿ ಇರುತ್ತಾರೆ.
ಹೆರಿಗೆಯಾಗಿ 4 ದಿನ ಕಳೆದರೂ ಅವರು ನಂಬಿದ್ದ ವ್ಯಕ್ತಿ ಹಣ ನೀಡದೆ ಸತಾಯಿಸುವುದನ್ನು ಕಂಡು ಸ್ಪೆಷಲ್ ರೂಮ್ ನಿಂದ ಜನರಲ್ ವಾರ್ಡಿಗೆ ಶಿಫ್ಟ್ ಆಗುತ್ತಾರೆ.

ಆ ಬಳಿಕ 14 ದಿನ ಕಳೆದರೂ ಆಕೆಯ ಪತಿ ಹಣ ಹೊಂದಿಸಲು ಸಾಧ್ಯವಾಗದೆ ಸಬಿತ ಇಲ್ಲಿ ಆಸ್ಪತ್ರೆಯಲ್ಲಿ ಹೆಣ್ಣು ಮಕ್ಕಳೊಂದಿಗೆ ಊಟಕ್ಕೂ ಕೂಡ ಹಣವಿಲ್ಲದೆ ಸಂಕಷ್ಟಕ್ಕೀಡಾದರು.

ಈ ಮಹಿಳೆ ಮಲಗಿದ್ದ ಪಕ್ಕದ ಬೆಡ್ಡಿನಲ್ಲಿ ಸುಳ್ಯ ಭಾರತ್ ಶಾಮಿಯಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅಬ್ಬು ಎಂಬುವವರ ಮನೆಯವರು ಇದ್ದು ಮನೆಯವರು ಈ ಮಹಿಳೆಯ ನೋವನ್ನು ನೋಡಿ ವಿಷಯವನ್ನು ಅಬ್ಬು ರವರಿಗೆ ತಿಳಿಸಿದ್ದಾರೆ.

ಅದರೊಂದಿಗೆ ಯುವ ತೇಜಸ್ ಸಂಘಟನೆಗೆ ಮಾಹಿತಿ ತಿಳಿದು ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಹಾಯಕ್ಕಾಗಿ ಅಭ್ಯರ್ಥನೆ ಮಾಡಿದ್ದಾರೆ.

ಯುವ ತೇಜಸ್ ಮೂಲಕ ಕೊಡಗು ಮಾಧ್ಯಮ ಸ್ಪಂದನ ಬಳಗದ ಸದಸ್ಯ ವಿಶ್ವಕುಮಾರ್ ಕುಂಬೂರು ಎಂಬುವರಿಗೆ ಮಾಹಿತಿ ತಿಳಿದು ಅವರ ಸಹಕಾರದಿಂದ ಚಾರಿಟೇಬಲ್ ಟ್ರಸ್ಟ್ ನಿಂದ ಸುಮಾರು 12 ಸಾವಿರದ ಮುನ್ನೂರು ರೂಪಾಯಿಗಳ ಧನಸಂಗ್ರಹ ಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಇನ್ನೂ 30 ಸಾವಿರಕ್ಕೂ ಹೆಚ್ಚು ಹಣ ಬೇಕಾಗಿದ್ದು ಅಬ್ಬು ರವರು ಸುಳ್ಯದ ಎಸ್ ಎಸ್ ಎಫ್ ಆಂಬುಲೆನ್ಸ್ ಚಾಲಕ ಸಿದ್ದಿ ಗೂನಡ್ಕ ಎಂಬವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಿದ್ದೀಕ್ ಹಾಗೂ ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆ ಎಂ ರವರು ಸುಳ್ಯದ ಪೇಟೆಯಲ್ಲಿ ವ್ಯಾಪಾರಸ್ಥರಾದ ದಾನಿಗಳ ಬಳಿ ತೆರಳಿ ಈ ಹಣವನ್ನು ಸಂಗ್ರಹ ಮಾಡಿ ಆಸ್ಪತ್ರೆಗೆ ಪಾವತಿಸಿ ಆಕೆಯನ್ನು ಕಳುಹಿಸುವ ಮನೆಗೆ ವ್ಯವಸ್ಥೆಯನ್ನು ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಕೆವಿಜಿ ಆಸ್ಪತ್ರೆಯವರು ಬಿಲ್ಲಿನಿಂದ ಸುಮಾರು ಹತ್ತು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ನೀಡಿದ್ದು, ಕೆಪಿಸಿಸಿ ವಕ್ತಾರ ಎಚ್ ಎಂ ನಂದಕುಮಾರ್ ಮಡಿಕೇರಿ ಅವರು ಕೂಡ ಸಹಾಯ ಹಸ್ತವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಆ ಮಹಿಳೆಯನ್ನು, ಮತ್ತು ಮಕ್ಕಳನ್ನು ಸುಳ್ಯದ ಎಸ್ಎಸ್ಎಫ್ ಸಂಘಟನೆಯ ಆಂಬುಲೆನ್ಸ್ ನಲ್ಲಿ ವಿರಾಜಪೇಟೆ ಅವರ ಮನೆಗೆ ಕರೆದುಕೊಂಡು ಹೋಗಿ ಬಿಡಲಾಗಿದೆ.

ಇದರ ಹಿಂದೆ ಕಾರ್ಯ ಪ್ರವರ್ತರಾಗಿ ಆಪತ್ಬಾಂಧವರಾಗಿ ಪ್ರವರ್ತಿಸಿ ಬಡ ಕುಟುಂಬಕ್ಕೆ ಸಹಕರಿಸಿದ ಕಾರ್ಯ ಸೌಹಾರ್ದತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.