ರಾಜ್ಯ ಬಜೆಟ್ ನಲ್ಲಿ ಈ ಬಾರಿ ಮೀನುಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ

0

ರಾಜ್ಯದ ಅಭಿವೃದ್ಧಿಯ ಪರವಾಗಿ ಪರಿಸರಸ್ನೇಹಿ ಬಜೆಟ್ : ಸಚಿವ ಎಸ್. ಅಂಗಾರ

2022 -23 ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಅತ್ಯುತ್ತಮ ಕರಾವಳಿ ರಾಜ್ಯವೆಂದು ಗುರುತಿಸಿ ಕೇಂದ್ರ ಸರ್ಕಾರವು ಘೋಷಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾಗೂ ಈ ಬಾರಿಯ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದೆ. ಅದರಲ್ಲೂ ಮೀನುಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಒದಗಿಸಲಾಗಿದ್ದು, ರಾಜ್ಯದ ಅಭಿವೃದ್ಧಿಯ ಪರವಾಗಿ ಭವಿಷ್ಯದ ಪರಿಸರಸ್ನೇಹಿ ಬಜೆಟ್ ಆಗಿದೆ ಎಂದು ರಾಜ್ಯ ಮೀನುಗಾರಿಕೆ , ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಹೇಳಿದರು.

ಬಜೆಟ್ ಮಂಡನೆಯಾದ ಬಳಿಕ ‘ಸುದ್ದಿ’ ಯೊಂದಿಗೆ ಮಾತನಾಡಿದ ಅವರು “ಕಳೆದ ಸಾಲಿನಲ್ಲಿ 10.73 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯನ್ನು
ಮಾಡಿ ದೇಶದಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದೆ. ರಾಜ್ಯದ ಅಭಿವೃದ್ಧಿಗೆ ನೆರವಾಗುವ ನಿಟ್ಟಿನಲ್ಲಿ ಹಲವು ಜನಪರ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ನೀಡಲಾಗಿದೆ ಎಂದು ಹೇಳಿದರು.

2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕಾ ಕ್ಷೇತ್ರಕ್ಕೆ ದೊರೆತ ಯೋಜನೆಗಳ ಸಾರಾಂಶ :

ರಾಜ್ಯದ ಮೀನುಗಾರರಿಗೆ ನೆರವಾಗಲು 62 FFPO ಗಳ ಸ್ಥಾಪನೆ ಹಾಗೂ 12,175 ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ
ವಹಿಸಲಾಗಿದೆ.

ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮ ಪಡಿಸಲು ಕರಾವಳಿ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಪ್ರಧಾನ ಮಂತ್ರಿ
ಮತ್ಸ್ಯ ಸಂಪದ ಯೋಜನೆಯಡಿ ಕೃತಕ ಬಂಡೆ ಸಾಲುಗಳನ್ನು (Artificial Reef) ಸ್ಥಾಪಿಸಲಾಗುವುದು.

ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿಗಳ ದಾಸ್ತಾನು (Ranching) ಪ್ರೋತ್ಸಾಹಿಸಲು 20 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಮೀನು ಕೃಷಿಯನ್ನು ಉತ್ತೇಜಿಸಲು ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರವನ್ನು ಸ್ಥಾಪಿಸಲಾಗುವುದು.

ಸಾರ್ವಜನಿಕರಿಗೆ ಗುಣಮಟ್ಟದ ಮೀನು ಉತ್ಪನ್ನಗಳನ್ನು ಪೂರೈಸಲು ಪರಿಸರಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನಗಳನ್ನು ಕೇಂದ್ರ
ಸರ್ಕಾರದ ಸಹಯೋಗದೊಂದಿಗೆ ಒದಗಿಸಲಾಗುವುದು. ಮೀನುಗಾರರ ಹಾಗೂ ಅವರ ದೋಣಿಗಳ ಸುರಕ್ಷತೆಗಾಗಿ 17 ಕೋಟಿ ರೂ. ಗಳ ಅನುದಾನದಲ್ಲಿ ISRO ಅಭಿವೃದ್ಧಿಪಡಿಸಿರುವ GPS ಸಂವಹನ ವ್ಯವಸ್ಥೆಯನ್ನು ಎಲ್ಲಾ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಲ್ಲಿ ಅಳವಡಿಸಲಾಗುವುದು. ಇದರಿಂದ ಆಳ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೋಣಿಗಳನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ. ಮೀನುಗಾರರಿಗೆ ವಸತಿ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಿರುವ
ನಮ್ಮ ಸರ್ಕಾರ ಕಳೆದ ವರ್ಷ ವಸತಿ ರಹಿತ ಮೀನುಗಾರರಿಗೆ 5,000 ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯನ್ನು 10,000 ವಸ ತಿರಹಿತ ಮೀನುಗಾರರಿಗೆ ವಿಸ್ತರಿಸಲಾಗುವುದು.

ಸೀಮೆಎಣ್ಣೆ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯ ಮತ್ತು ಅದರ ಬೆಲೆಯ ಏರಿಳಿತದಿಂದ ದೋಣಿಗಾರರಿಗೆ ಉಂಟಾಗುವ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ಮುಂದಿನ 2 ವರ್ಷಗಳಲ್ಲಿ ಎಲ್ಲಾ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್/ಡೀಸೆಲ್ ಆಧಾರಿತ ಮೋಟಾರ್ ಇಂಜಿನ್ ಅನ್ನು ಅಳವಡಿಸಲು ತಲಾ 50 ಸಾವಿರ ರೂ.ನಂತೆ ಸಹಾಯಧನ ನೀಡಲಾಗುವುದು. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ 40 ಕೋಟಿ ರೂ. ಗಳನ್ನು ಮೀಸಲಿಡಲಾಗುವುದು. ಈ ಪ್ರಕ್ರಿಯೆಯು 2 ವರ್ಷಗಳ ಅವಧಿಗೆ ಪೂರ್ಣಗೊಳ್ಳುವವರೆಗೆ ಮುಂದಿನ ಸೀಮೆಎಣ್ಣೆ ಸಹಾಯಧನ ಮುಂದುವರೆಸಲಾಗುವುದು. ಮೀನುಗಾರರ ದೋಣಿಗಳಿಗಾಗಿ
ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್‌ನ ಮಿತಿಯನ್ನು ಸದ್ಯದ 1.5 ಲಕ್ಷ ಕಿಲೋ ಲೀಟರ್‌ಗಳಿಂದ 2 ಲಕ್ಷ ಕಿಲೋಲೀಟರ್‌ಗಳವರೆಗೆ ಹೆಚ್ಚಿಸಲಾಗುವುದು. ಇದರಿಂದ ಮೀನುಗಾರರಿಗೆ ರಾಜ್ಯ ಸರ್ಕಾರದಿಂದ 250 ಕೋಟಿ ರೂ.ಗಳ ನೆರವಾಗಲಿದೆ.

ಮೀನುಗಾರರಿಗೆ ನೀಡುತ್ತಿರುವ ಸೀಮೆ ಎಣ್ಣೆ ಸಹಾಯಧನದ
ಸರಳೀಕರಿಸಿ ಪ್ರಸಕ್ತ ಸಾಲಿನಿಂದ ಡಿಬಿಟಿ ಮುಖಾಂತರ ನೇರವಾಗಿ ಮೀನುಗಾರರ ಖಾತೆಗೆ ಜಮೆ
ಮಾಡಲಾಗುವುದು. ಆಳಸಮುದ್ರ ಮೀನುಗಾರಿಕೆಯನ್ನು ಇನ್ನಷ್ಟು ಉತ್ತೇಜಿಸಲು 100 ಆಳ
ಸಮುದ್ರ ಮೀನುಗಾರಿಕಾ ದೋಣಿಗಳಿಗೆ (Deep sea fishing
boats) ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ
ಸಂಯೋಜಿಸಿ ಮತ್ಯ ಸಿರಿ ಎಂಬ ವಿಶೇಷ ಯೋಜನೆಯನ್ನು
ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರೂಪಿಸಲಾಗಿದೆ. ಆಯ್ಕೆಯಾದ
ಎಲ್ಲಾ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ದೋಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಸಿಗಡಿ ಉತ್ಪನ್ನಗಳ ರಫ್ತು ಪ್ರೋತ್ಸಾಹಿಸಲು ಕೇಂದ್ರ ಆಯವ್ಯಯದಲ್ಲಿ
ರಫ್ತು ಸುಂಕವನ್ನು ಕಡಿಮೆ ಮಾಡಲಾಗಿದೆ. ಈ ಅವಕಾಶವನ್ನು
ಸದುಪಯೋಗಪಡಿಸಿಕೊಳ್ಳಲು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಿಗಡಿ ಕೃಷಿ
ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವುದು. ರಾಜ್ಯದ 8 ಮೀನುಗಾರಿಕೆ ಬಂದರುಗಳ ನ್ಯಾವಿಗೇಷನ್ ಚಾನೆಲ್
ಗಳಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಟೆಂಡರ್‌ ಕರೆಯಲಾಗಿದೆ. ಇದರಿಂದ ಮೀನುಗಾರಿಕೆ ದೋಣಿಗಳ ಸುಗಮ
ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ.

ರಾಜ್ಯದಲ್ಲಿ ಮೀನಿನ ರಫ್ತು ಮತ್ತು ಮೌಲ್ಯವರ್ಧನೆಗಾಗಿ ಬೈಂದೂರು
ತಾಲ್ಲೂಕಿನ ಕಂಬದಕೋಣೆಯಲ್ಲಿ Seafood Park ಅನ್ನು
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಕಳೆದ ವರ್ಷದಲ್ಲಿ ರಾಜ್ಯದ ಸಣ್ಣ ಬಂದರುಗಳ ಮುಖಾಂತರ 6 ಲಕ್ಷ
ಟನ್ನುಗಳಿಗಿಂತ ಹೆಚ್ಚು ಸರಕುಗಳನ್ನು ಸರಬರಾಜು ಮಾಡಲಾಗಿದೆ.
ಭಾರತ ಸರ್ಕಾರದ ಸಾಗರಮಾಲ ಯೋಜನೆಯಡಿ ಈಗಾಗಲೇ 370
ಕೋಟಿ ರೂ. ಗಳ ನಾಲ್ಕು ಕಿರು ಬಂದರುಗಳ ಅಭಿವೃದ್ಧಿ
ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ 597 ಕೋಟಿ ರೂ.
ಗಳ 12 ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲವಾಗಿ, ಉತ್ತರ ಕನ್ನಡ
ಜಿಲ್ಲೆಯ ಅಂಕೋಲಾದ ಕೇಣಿಯಲ್ಲಿ 30 MTPA ಸಾಮರ್ಥ್ಯದ deep water All weather Greenfield ಬಂದರುಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ
ಅಭಿವೃದ್ಧಿಗೊಳಿಸಲಾಗುವುದು.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಾಜಾಳಿಯಲ್ಲಿ ಅತ್ಯಾಧುನಿಕ
ಮೀನುಗಾರಿಕಾ ಬಂದರನ್ನು ನಿರ್ಮಿಸಲು 275 ಕೋಟಿಯ ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಸಾಗರಮಾಲಾ ಯೋಜನೆಗಳಡಿಯಲ್ಲಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಂಗಾರಕಟ್ಟೆ ಮತ್ತು ಉಡುಪಿಯಲ್ಲಿ, ಕೊಚ್ಚಿನ ಶಿಪ್‌ಯಾರ್ಡ್
ಲಿಮಿಟೆಡ್‌ರವರಿಂದ ದೋಣಿ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹಳೆ ಮಂಗಳೂರು ಬಂದರಿನಲ್ಲಿ ಹೆಚ್ಚುವರಿ ಶಿಪ್ ಯಾರ್ಡ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು. ಇದು
ಕರಾವಳಿ ಪ್ರದೇಶದಲ್ಲಿ ಕೈಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳ
ಬೆಳವಣಿಗೆಗೆ ಪೂರಕವಾಗಲಿದೆ.

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮರೀನಾವನ್ನು ಅಭಿವೃದ್ಧಿಪಡಿಸಲಾಗುವುದು. ಪ್ರಧಾನ ಮಂತ್ರಿಗಳ ಆಶಯದಂತೆ, Blue Economyಯ
ಅಭಿವೃದ್ಧಿಗಾಗಿ ADB ಸಹಯೋಗದೊಂದಿಗೆ ಅಂದಾಜು 1,100 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರವು ಉದ್ದೇಶಿಸಿದೆ.

ಗುರುಪುರ ಮತ್ತು ನೇತ್ರಾವತಿ ನದಿಗಳ ಪಾತ್ರದಲ್ಲಿ ಜಲಸಾರಿಗೆ
ಸಂಪರ್ಕವನ್ನು ಕಲ್ಪಿಸಲು ಬಾರ್ಜ್‌ಗಳ ಸೇವೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು. ಅಲ್ಲದೆ, ಬಾಗಲಕೋಟೆ-ಕಂಕಣವಾಡಿ- ಕದಮ್‌ಪುರ, ಕಲಬುರಗಿ-ಸನ್ನತಿ,
ಶಿವಮೊಗ್ಗ-ಕೊಗರು-ಶಿಗ್ಗು, ಮಂಗಳೂರು-ಹಂಗಾರಕಟ್ಟೆಯಲ್ಲಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೊಸ Light Cargo Transport ( LCT) ಬೋಟ್ ಸೇವೆಗಳನ್ನು ಪ್ರಾರಂಭಿಸಲಾಗುವುದು.

ಕರಾವಳಿ ಪ್ರದೇಶದಲ್ಲಿ ಜನರ ಸುಗಮ ಸಂಚಾರಕ್ಕಾಗಿ ಮತ್ತು ವಾಣಿಜ್ಯ ವ್ಯವಹಾರಗಳನ್ನು ಉತ್ತಮಗೊಳಿಸಲು
ಮಂಗಳೂರು- ಕಾರವಾರ – ಗೋವಾ – ಮುಂಬಯಿ
Waterways ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ
ಅಭಿವೃದ್ಧಿಪಡಿಸಲಾಗುವುದು.
ಒಟ್ಟಾರೆ ಈ ಬಾರಿಯ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಮತ್ತು ಮೀನುಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.