ಕೊಡಿಯಾಲ ಗ್ರಾಮ ಪಂಚಾಯತ್ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ

0

ಮನಸ್ಸಿನ ಜಾಗೃತಿಯಿಂದ ಸ್ವಚ್ಛ ಸಮಾಜ ನಿರ್ಮಾಣ – ಶ್ರೀ ಗುರುದೇವಾನಂದ ಸ್ವಾಮೀಜಿ

ಸಮಾಜಮುಖಿ ಯೋಚನೆಯಿಂದ ಅಭಿವೃದ್ಧಿ – ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

ಕೊಡಿಯಾಲ ಗ್ರಾಮ ಪಂಚಾಯತ್ ಸ್ವಚ್ಛತಾ ಅಭಿಯಾನ ಸಂಭ್ರಮ -2 ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣಾ ಕಾರ್ಯಕ್ರಮವು ಮಾ.19 ರಂದು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳು ಹಾಗೂ ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ದೀಪ ಪ್ರಜ್ವಲನೆ ಮಾಡಿ ಬಳಿಕ ಆಶೀರ್ವಚನ ನೀಡಿದರು.


ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ವಿವಿಧ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ, ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ,ಜಲಜೀವನ್ ಮಿಷನ್ ಇದರ ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳ ಅಧ್ಯಕ್ಷತೆ ವಹಿಸಿ ಗ್ರಾಮದ ಎಲ್ಲಾ ಜನರ ಸಹಕಾರದಿಂದ ಗ್ರಾಮ ಪಂಚಾಯತ್ ವತಿಯಿಂದ ಹಲವಾರು ಅಭಿವೃದ್ಧಿ ಕೆಲಸಗಳು ಆಗಿದೆ.ಮುಂದೆಯೂ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಮನೆ ನಿವೇಶನದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಜನರನ್ನು ಗುರುತಿಸಿ ಅವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಪುತ್ತೂರು ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಮಂಡಲ ಸಮಿತಿ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ನ್ಯಾಯವಾದಿ ಯತೀಶ್ ಆರ್ವಾರ, ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯ.ಸ.ಅಧ್ಯಕ್ಷ ವಸಂತ ನಡುಬೈಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ, ಸದಸ್ಯ ಕರುಣಾಕರ ಆಳ್ವ, ಪೆರುವಾಜೆ ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಪ್ರಾಸ್ತಾವಿಕ ಮಾತನಾಡಿದರು.


ಯಶೋಧ ಆರ್ವಾರ ಸ್ವಾಗತಿಸಿ, ಕು.ಕೃಪಾಶ್ರೀ ಪ್ರಾರ್ಥಿಸಿ,ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.
ಸಭಾ ಕಾರ್ಯಕ್ರಮ ನಡೆದ ಬಳಿಕ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಕಾಂತಾರ ಚಲನ ಚಿತ್ರ ಪ್ರದರ್ಶನ ನಡೆಯಿತು.
ಸುದ್ದಿ ಬಿಡುಗಡೆ ವತಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗಿತ್ತು.ವೇದಿಕೆಯಲ್ಲಿ ಬೃಹತ್ ಎಲ್.ಇ.ಡಿ. ಅಳವಡಿಸಲಾಗಿತ್ತು.