ಚುನಾವಣೆಯಲ್ಲಿ ಕೋಮು ದ್ವೇಷದ ಅಜೆಂಡಾಗಳು ಬೇಡ. ಶಿಕ್ಷಣ, ಆರೋಗ್ಯ, ಉದ್ಯೋಗದ ಪ್ರಶ್ನೆಗಳು ಚರ್ಚೆಯಾಗಲಿ: ಸಿಪಿಐಎಂ ಕರೆ

0


ಗೆಲ್ಲುವ ಅವಕಾಶ ಇರುವ ಜಾತ್ಯತೀತವಾದಿಗಳಿಗೆ ಬೆಂಬಲ : ಮುನೀರ್ ಕಾಟಿಪಳ್ಳ

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಕೋಮು ಅಜೆಂಡಾಗಳನ್ನು ಇರಿಸಿಕೊಂಡು ಆಡಳಿತ ನಡೆಸುತ್ತಾ ಸಮಾಜದ ನೆಮ್ಮದಿಯನ್ನು ಹಾಳುಮಾಡಿದೆ. ಭಾರೀ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಈ ಫ್ಯಾಸಿಸ್ಟ್ ಶಕ್ತಿಯನ್ನು ಅಧಿಕಾರದಿಂದ ದೂರವಿರಿಸುವುದು ಸದ್ಯದ ಅಗತ್ಯವಾಗಿರುವುದರಿಂದ ಯುವ ಜನತೆ ಈ ಬಾರಿ ಬಿಜೆಪಿಯ ವಿರುದ್ಧ ಮತ ನೀಡಿ ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.
ಇಂದು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿಯ ವೈಫಲ್ಯಗಳನ್ನು ಪಟ್ಟಿ ಮಾಡಿದರು. ಚುನಾವಣೆಯಲ್ಲಿ ಕೋಮುದ್ವೇಷದ ಅಜೆಂಡಾಗಳು ಚರ್ಚೆಯಾಗಬಾರದು. ಜನರ ಬದುಕಿನ ವಿಚಾರಗಳಾದ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಪ್ರಶ್ನೆಗಳು ಚರ್ಚೆಯಾಗಬೇಕು ಎಂದರು.


ದ.ಕ. ಜಿಲ್ಲಾ ಸಿಪಿಎಂ ಕಾರ್ಯಕಾರಿ ಸಮಿತಿ ಸದಸ್ಯ ಸುನಿಲ್‌ಕುಮಾರ್ ಬಜಾಲ್ ಮಾತನಾಡಿ, ಕಾರ್ಮಿಕರ ಹಿತದ ವಿರುದ್ಧ ಬಿಜೆಪಿ ಸರಕಾರ ನಡೆದುಕೊಳ್ಳುತ್ತಿದ್ದು, ಇತ್ತೀಚೆಗೆ ಕಾರ್ಮಿಕರ ಕೆಲಸದ ಅವಧಿಯನ್ನೂ ಹೆಚ್ಚಿಇಸಿದೆ. ಇಂತಹ ಕಾರ್ಪೋರೇಟ್ ಪರ ಆಡಳಿತ ನೀಡುವ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಬೇಕು ಎಂದು ಹೇಳಿದರು.
ಮೊನ್ನೆ ಸುಳ್ಯದಲ್ಲಿ ನಡೆದ ಮೂವರು ಕಾರ್ಮಿಕರ ಮೃತ್ಯು ಘಟನೆಯಲ್ಲಿ ಒಂದು ಕಾರ್ಮಿಕ ಸಂಘವಾಗಿ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ನಾವು ಮಾಡಿದ್ದೇವೆ. ಪರಿಹಾರಕ್ಕೆ ವ್ಯವಸ್ಥೆ ಮಾಡಿದ್ದೇವೆ. ಆದರೆ ಸುಳ್ಯದ ಶಾಸಕರಾದ ಸಚಿವ ಅಂಗಾರರು ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕಿತ್ತು. ಆದರೆ ಇದುವರೆಗೆ ಅದನ್ನು ಮಾಡದಿರುವುದು ಖೇದಕರ ಎಂದು ಸುಳ್ಯ ತಾಲೂಕು ಸಿಐಟಿಯು ಕಾರ್ಯದರ್ಶಿ ಕೆ.ಪಿ. ಜಾನಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಿಪಿಎಂ ಕಾರ್ಯದರ್ಶಿ ನಾಗರಾಜ್, ಬಿಜು ಅಗಸ್ಟಿನ್, ಪ್ರಸಾದ್ ಜಿ.ಆರ್., ಶಿವರಾಮ ಗೌಡ ಉಪಸ್ಥಿತರಿದ್ದರು.