ಏ.16ರಿಂದ ಮೇ14ರ ತನಕ ಶ್ರೀ ಕೇಶವಕೃಪಾ ಅಂತರ್‌ರಾಜ್ಯ ಮಟ್ಟದ 23 ನೇ ವರ್ಷದ ವೇದ-ಯೋಗ ಕಲಾ ಶಿಬಿರ

0

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವ ಕೃಪಾ
ವೇದ ಯೋಗ ಕಲಾ ಶಿಬಿರವು ಏಪ್ರಿಲ್ 16 ರಿಂದ ಮೇ 14ರ ತನಕ ನಡೆಯಲಿದೆ ಎಂದು ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಇಂದು ಸುಳ್ಯ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಿಬಿರದ ಸಂಚಾಲಕ ಅಭಿರಾಮ್ ಭಟ್ ಮಾತನಾಡಿ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳಿಂದ ರಾಜ್ಯ ಹಾಗೂ
ಅಂತರ್‌ರಾಜ್ಯಗಳಲ್ಲಿ ಜನಮೆಚ್ಚುಗೆ ಗಳಿಸಿದ ವೇದ-ಯೋಗ ಕಲಾ ಶಿಬಿರವಾಗಿ ಇದೀಗ ಇಪ್ಪತ್ತಮೂರನೇ
ವರ್ಷದ ಸಂಭ್ರಮದಲ್ಲಿದೆ.
ಸಣ್ಣ ಮಕ್ಕಳ ದೊಡ್ಡ ರಜೆ ಆರಂಭವಾದೊಡನೆ ಹಲವಾರು ಶಿಬಿರಗಳು ಆರಂಭಗೊಳ್ಳುತ್ತದೆ. ನಾಟಕ ಶಿಬಿರ,ರಂಗ ತರಬೇತಿ ಶಿಬಿರ, ಚಿಣ್ಣರ ಶಿಬಿರ, ನಾಯಕತ್ವ ಶಿಬಿರ ಸೇರಿದಂತೆ ಇನ್ನಿತರ ಶೀಬಿರಗಳು ಅಲ್ಲಲ್ಲಿ
ನಡೆದರೂ ಭಾರತದ ಸಾಂಸ್ಕೃತಿಕ ಮೌಲ್ಯಗಳಿಗೆ ಪ್ರಧಾನ ಭೂಮಿಕಿಗಳಾದ ವೇದ ಶಿಬಿರಗಳು ಮಾತ್ರ
ಎಲ್ಲೋ ಕೆಲವು ಕಡೆ ನಡೆಯುತ್ತದೆಯಷ್ಟೆ.
ಅಂತಹ ವೇದ ಶಿಬಿರಗಳಲ್ಲಿ ಒಂದಾದ ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ
ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರವು ಕಳೆದ 22 ವರ್ಷಗಳಿಂದ
ಸಂಪೂರ್ಣ ಉಚಿತವಾಗಿ ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯ
ಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಸಂಪೂರ್ಣ ಉಚಿತವಾಗಿ ನಡೆಸಿಕೊಂಡು ಬರುತ್ತಿದೆ.

ಇಲ್ಲಿನ ವೇದ ಶಿಬಿರದ ವಿಶೇಷತೆಯೇನೆಂದರೆ ಬರೇ ವೇದ ಪಾಠ ಮಾತ್ರವಲ್ಲದೆ
ವೇದಾಂತರ್ಗತವಾದ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಮಾಧ್ಯಮವಾದ
ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ ಮುಂತಾದವುಗಳೂ ಅಲ್ಲದೆ ಇಂದಿನ ಮಕ್ಕಳಲ್ಲಿ
ರಾಷ್ಟ್ರಪ್ರೇಮದ ಭಕ್ತಿ ತರಂಗವನ್ನು ಮೂಡಿಸುವ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಮಕ್ಕಳ
ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ಮುಖವಾಡ ತಯಾರಿ, ಬೊಂಬೆ ತಯಾರಿ,
ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ ರಂಗಕಲೆ, ರಂಗಪಾಠಗಳು,
ರಂಗಗೀತೆ, ಚಿತ್ರಕಲೆ ಹೀಗೆ ಹಲವಾರು ವಿಷಯಗಳಲ್ಲಿ ರಾಜ್ಯದ ಸುಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳೊಂದ
ಶಿಕ್ಷಣ ನೀಡಲಾಗುತ್ತದೆ. ಅಲ್ಲದೇ ಈ ವರ್ಷ ಮತ್ತೂ ಒಂದು ಹೆಜ್ಜೆ ಮುಂದಡಿಯಿಟ್ಟು ಇದೇ ಶಿಬಿರದಲ್ಲಿ
ಮೂರು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಅಗ್ನಿ ಮುಖ ಪ್ರಯೋಗ ಹಾಗೂ ದುರ್ಗಾಸಪ್ತಶತೀ ತರಗತಿಗಳು ನಡೆಯಲಿದ್ದು, ರಾಜ್ಯದ ಪ್ರಸಿದ್ಧ ವೇದ ವಿದ್ವಾಂಸರು, ಕಲಾತಜ್ಞರು, ಯೋಗ ಶಿಕ್ಷಕರು ಅಧ್ಯಾಪಕರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಬಿರದ ಉದ್ಘಾಟನಾ ಸಮಾರಂಭದ ಬಗ್ಗೆ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ್ ಭಟ್ ಏಪ್ರಿಲ್ 16ರಂದು ಬೆಳಿಗ್ಗೆ 10.30 ಕ್ಕೆ ಹಳೆ ಗೇಟು ವಿದ್ಯಾನಗರದ ಕೇಶವ ಕಿರಣ ಸಭಾಂಗಣದಲ್ಲಿ ನಡೆಯಲಿದ್ದು ಉದ್ಘಾಟನಾ ಕಾರ್ಯಕ್ರಮವನ್ನು ಸಾಫ್ಟ್ವೇರ್ ಇಂಜಿನಿಯರ್ ಶ್ರೀನಿಧಿ ಉಪಾಧ್ಯಾಯ ರವರು ನೆರವೇರಿಸಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೇದಮೂರ್ತಿ ಸುದರ್ಶನ ಭಟ್ ಉಜಿರೆ ವಹಿಸಲಿದ್ದಾರೆ. ದಿಕ್ಸೂಚಿ ಉಪನ್ಯಾಸ ಕಾರ್ಯಕ್ರಮವನ್ನು ಮೇಲುಕೋಟೆ ಸರಕಾರಿ ಸಂಸ್ಕೃತ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ ಕೆರೆಕೈ ನೀಡಲಿದ್ದಾರೆ. ಮುಖ್ಯ ಅಭ್ಯಾಗತರು ಗೀತಾ ಸಾಹಿತ್ಯ ಸಂಭ್ರಮ ನಿರ್ದೇಶಕ ವಿಠಲ ನಾಯಕ್ ಅಧ್ಯಾಪಕರು, ಹಾಗೂ ಕಾರ್ಯಕ್ರಮದಲ್ಲಿ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲ ಕೃಷ್ಣ ಭಟ್ ವಗೆನಾಡು ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ನಮ್ಮ ಶಿಬಿರಕ್ಕೆ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅವಕಾಶಕ್ಕಾಗಿ ಹೆಸರು ನೊಂದಾಯಿಸುತ್ತಿದ್ದು ಇವರಿಗೆ ಪ್ರವೇಶ ಪರೀಕ್ಷೆ ಸುಳ್ಯ ಶಿವ ಕೃಪಾ ಸಭಾಂಗಣದಲ್ಲಿ ನಡೆಸಿ ಇವರಿಂದ 60 ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಹಿಂದಿನ ವರ್ಷಗಳ ನೂರು ಜನ ವಿದ್ಯಾರ್ಥಿಗಳನ್ನು ಸೇರಿ ಒಟ್ಟು 160 ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಸುಜಾತ ರಾಧಾಕೃಷ್ಣ, ಗೋಪಾಲಕೃಷ್ಣ ಭಟ್ ಉಬರಡ್ಕ ಮಿತ್ತೂರು ಉಪಸ್ಥಿತರಿದ್ದರು.