ಕನಕಮಜಲು: ಪ್ರಾ.ಕೃ.ಪ.ಸಂಘದ ಉಪ ಕಾರ್ಯನಿರ್ವಹಣಾಧಿಕಾರಿ ಗಂಗಾಧರ ಕಾಳಮನೆ ನಿವೃತ್ತಿ

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪ ಕಾರ್ಯನಿರ್ವಹಣಾಧಿಕಾರಿಯಾಗಿದ್ದಜಾಲ್ಸೂರು ಗ್ರಾಮದ ಕಾಳಮನೆ ನಿವಾಸಿ, ಗಂಗಾಧರ ಕಾಳಮನೆ ಅವರು ತಮ್ಮ42 ವರ್ಷಗಳ ಸುದೀರ್ಘ ಸೇವೆಯಿಂದ ಎ.30ರಂದು ನಿವೃತ್ತರಾಗಿದ್ದಾರೆ.

ಕನಕಮಜಲು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 12 – 6 – 1980ರಲ್ಲಿ ದಿನವಹಿ ಸಂಬಳ ನೌಕರನಾಗಿ ಸೇವೆ ಆರಂಭಿಸಿದ ಗಂಗಾಧರ ಕಾಳಮನೆ ಅವರು 1985ರಿಂದ 1992ರವರೆಗೆ ಅಡ್ಕಾರು ಮತ್ತು ಸೋಣಂಗೇರಿ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಏಳು ವರ್ಷ ಸೇವೆ ಸಲ್ಲಿಸಿ, 1993ರಿಂದ 1996ರವರೆಗೆ ಕನಕಮಜಲಿನ ಪ್ರಧಾನ ಕಛೇರಿಯಲ್ಲಿ ನಗದು ವಿಭಾಗದಲ್ಲಿ ಸೇವೆ, ಬಳಿಕ ಜಾಲ್ಸೂರು ಶಾಖೆಯಲ್ಲಿಯೂ ನಗದು ವಿಭಾಗದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಬಳಿಕ ಮರಳಿ ಕನಕಮಜಲಿನ ಪ್ರಧಾನ ಕಛೇರಿಯಲ್ಲಿ ಸೇವೆ ಸಲ್ಲಿಸಿ, 2015ರಿಂದ ಜಾಲ್ಸೂರು ಶಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಣಾಧಿಕಾರಿಯಾಗಿ 2021ರವರೆಗೆ ಸೇವೆ ಸಲ್ಲಿಸಿದರು. ಇದಾದ ಬಳಿಕ ಕನಕಮಜಲಿನ ಪ್ರಧಾನ ಕಛೇರಿಯಲ್ಲಿ ಎರಡು ವರ್ಷಗಳ ಕಾಲ ಉಪ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಒಟ್ಟು 42 ವರ್ಷಗಳ ಕಾಲ ಸೇವೆ ಸಲ್ಲಿಸಿ ಎ.30ರಂದು ನಿವೃತ್ತಿಗೊಂಡಿದ್ದಾರೆ.

ಇವರ ಪತ್ನಿ ಶ್ರೀಮತಿ ವಿಜಯ ಅವರು ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಯಜ್ಞೇಶ್ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಪೂರ್ತಿಗೊಳಿಸಿದ್ದು, ಮುಂದೆ ಕಾಲೇಜು ವಿದ್ಯಾಭ್ಯಾಸ ನಡೆಸಲಿದ್ದಾರೆ. ಪುತ್ರಿ ಯಜ್ಞ ಕಾಳಮನೆ ಒಂಭತ್ತನೇ ತರಗತಿ ವ್ಯಾಸಂಗ ನಡೆಸುತ್ತಿದ್ದಾರೆ.