ವಿಶ್ವ ಡೆಂಗ್ಯು ಜ್ವರ ನಿಯಂತ್ರಣ ದಿನ : ಸುಳ್ಯದಲ್ಲಿ ಜಾಗೃತಿ ಜಾಥಾ

0

ಅಂಗಡಿ, ಮನೆಗಳಿಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ

ಒಂದು ಸಮಯದಲ್ಲಿ ಡೆಂಗ್ಯು ಜ್ವರ ಸುಳ್ಯದಲ್ಲಿ ಹೆಚ್ಚಾಗಿದ್ದ ದಿನಗಳಿದ್ದವು. ಆದರೆ ಆ ಬಳಿಕದ ದಿನಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಯಾ ವ್ಯಾಪ್ತಿಯ ಜನರ ಸಹಕಾರದಿಂದ ಜಾಗೃತಿ ಮೂಡಿಸಿದ ಪರಿಣಾಮ ಡೆಂಗ್ಯು ಜ್ವರ ನಿಯಂತ್ರಣಕ್ಕೆ ಬಂದಿದೆ.‌

ಈ ಕುರಿತು ನಿರಂತರ ಜಾಗೃತಿ ಅಗತ್ಯ ಎಂದು ಸುಳ್ಯದ ಆರೋಗ್ಯ ವೈದ್ಯಾಧಿಕಾರಿ ಡಾ.ನಂದಕುಮಾರ್ ಹೇಳಿದರು.

ವಿಶ್ವ ಡೆಂಗ್ಯು ಜ್ವರ ನಿಯಂತ್ರಣ ದಿನಾಚರಣೆ ಪ್ರಯುಕ್ತ ಮೇ.16 ರಂದು ಆರೋಗ್ಯ ಇಲಾಖೆ ಹಾಗೂ ನಗರ ಪಂಚಾಯತ್ ನೇತೃತ್ವದಲ್ಲಿ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈಗ ಬೀಳುತ್ತಿರುವ ಅಕಾಲಿಕ ಮಳೆ ತುಂಬಾ ಅಪಾಯಕಾರಿ. ಮನೆಯ, ಅಂಗಡಿಗಳ ಸುತ್ತ ಇರುವ ಪಾತ್ರೆ, ಇನ್ನಿತರ ಕಡೆಗಳಲ್ಲಿ ನೀರು ನಿಂತು ಅಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ.‌ಆದ್ದರಿಂದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ ನಮ್ಮ ಮನೆಯ ಪರಿಸರ ಸ್ವಚ್ಚವಾಗಿಡುವಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕು.‌ ಡೆಂಗ್ಯು ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಅವರು ಹೇಳಿದರು.

ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ, ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆ ಯರು, ನಗರ ಪಂಚಾಯತ್ ಸಿಬ್ಬಂದಿಗಳು ಇದ್ದರು.

ತಾಲೂಕು ಆರೋಗ್ಯ ಅಧಿಕಾರಿಗಳ‌ ಕಚೇರಿಯಿಂದ ಹೊರಟ ಜಾಗೃತಿ ಜಾಥಾ ನಗರದಲ್ಲಿ‌ ಸಂಚರಿಸಿತು. ನಗರದ ಅಂಗಡಿ, ಮನೆಗಳಿಗೆ ತೆರಳಿ ಮಾಹಿತಿ ನೀಡುವ ಕಾರ್ಯವನ್ನೂ ಹಮ್ಮಿಕೊಳ್ಳಲಾಯಿತು.