ಕೋಲ್ಚಾರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಸಂಭ್ರಮದ ಚಾಲನೆ

0

ಕೋಲ್ಚಾರಿನಿಂದ ದೈವಸ್ಥಾನದ ತನಕ ಅದ್ದೂರಿಯ ಹಸಿರುವಾಣಿ ಮೆರವಣಿಗೆ

ಆಲೆಟ್ಟಿ ಗ್ರಾಮದ ಕೋಲ್ಚಾರು ಕುಟುಂಬಸ್ಥರ ತರವಾಡು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮೇ.16,17 ಮತ್ತು 18 ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ನಡೆಯಲಿದ್ದು ಇಂದು ಬೆಳಗ್ಗೆ ಮಹೋತ್ಸವಕ್ಕೆ ವಿಜೃಂಭಣೆಯಿಂದ ಚಾಲನೆ ನೀಡಲಾಯಿತು. ಬೆಳಗ್ಗೆ ಕೋಲ್ಚಾರು ಐನ್ ಮನೆಯಿಂದ ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆಯು ಅದ್ದೂರಿ ಯಾಗಿ ದೈವಸ್ಥಾನದ ವಠಾರಕ್ಕೆ ಸಾಗಿ ಬಂತು.

ಹಸಿರುಕಾಣಿಕೆಯನ್ನು ಸಂಪ್ರದಾಯದ ಪ್ರಕಾರ ತಲೆಯ ಮೇಲೆ ಹೊತ್ತು ಸಾಗಿದ ಮಹಿಳೆಯರು ಹಾಗೂ ಪೂರ್ಣ ಕುಂಭ ಹಿಡಿದ ಮಹಿಳೆಯರ ತಂಡ ಹಾಗೂ ನಾಸಿಕ್ ಬ್ಯಾಂಡ್ ವಾದ್ಯ ಘೋಷಗಳ ಮತ್ತು ಸಿಡಿಮದ್ದಿನ ಅಬ್ಬರದೊಂದಿಗೆ ಕಾಲ್ನಡಿಗೆಯಲ್ಲಿ ಮೆರವಣಿಗೆಯು ಅತ್ಯಂತ ಸಂಭ್ರಮದಿಂದ ಸಾಗಿತು.

ಬಳಿಕ ದೈವಸ್ಥಾನದಲ್ಲಿ ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಪೂಜ್ಯ ಸ್ಥಾನಿಕರ ಮಾರ್ಗದರ್ಶನದಲ್ಲಿ ವಯನಾಟ್ ಕುಲವನ್ ದೈವದ ಪಾತ್ರಿ ಆನಂದ ಅಡ್ಪಂಗಾಯ ಮತ್ತು ವಿಷ್ಣುಮೂರ್ತಿ ದೈವದ ಪಾತ್ರಿ ಸತೀಶ್ ಗುಂಡ್ಯ ರವರ ನೇತೃತ್ವದಲ್ಲಿ ದರ್ಶನ ಸೇವೆ ನಡೆದು ಶುಭ ಮುಹೂರ್ತದಲ್ಲಿ ಉಗ್ರಾಣ ತುಂಬುವ ಕಾರ್ಯವು ಸಂಪ್ರದಾಯದಂತೆ ಜರುಗಿತು.

ಈ ಸಂದರ್ಭದಲ್ಲಿ ಕೋಲ್ಚಾರು ಕುಟುಂಬದ ಹಿರಿಯರು ಮತ್ತು ಕಿರಿಯರು ಹಾಗೂ ದೈವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು ಮತ್ತು ಉತ್ಸವ ಸಮಿತಿ ಪದಾಧಿಕಾರಿಗಳು ಮತ್ತು ಉಪ ಸಮಿತಿ ಸದಸ್ಯರು ಹಾಗೂ ಊರಿನ ಪರ ಊರಿನ ಭಕ್ತಾದಿಗಳು ಭಾಗವಹಿಸಿದರು. ಗ್ರಾಮದ ಮತ್ತು ಹೊರ ಗ್ರಾಮಗಳಿಂದ ತರವಾಡು ಮನೆಯ ದೈವಸ್ಥಾನಗಳಿಂದ ಹಸಿರುವಾಣಿಯನ್ನು ತಂದು ಸಮರ್ಪಿಸಿದರು. ಈ ಸಂದರ್ಭದಲ್ಲಿ ಕೋಲ್ಚಾರು ಕುಟುಂಬಸ್ಥರ ಪರವಾಗಿ ಹಸಿರುವಾಣಿ ಸಮರ್ಪಿಸಿದ ಎಲ್ಲಾ ಭಕ್ತಾದಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.